ವಾಷಿಂಗ್ಟನ್/ರಿಯಾದ್: ಪಶ್ಚಿಮ ಏಷ್ಯಾದಲ್ಲಿ ಅಮೆರಿಕ ಮತ್ತು ಇರಾನ್ ನಡುವೆ ಸೃಷ್ಟಿಯಾಗಿರುವ ಯುದ್ಧದ ಕಾರ್ಮೋಡಗಳ ಹಿಂದೆ ಸೌದಿ ಅರೇಬಿಯಾದ ಚದುರಂಗದಾಟವಿದೆಯೇ? ಇಂತಹದೊಂದು ಗಂಭೀರ ಚರ್ಚೆ ಈಗ ಜಾಗತಿಕ ಭೌಗೋಳಿಕ ರಾಜಕೀಯ ವಲಯದಲ್ಲಿ ತೀವ್ರವಾಗಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್ ಮೇಲಿನ ದಾಳಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ ರಾಜತಾಂತ್ರಿಕತೆಗೆ ಅವಕಾಶ ನೀಡಲು ಮುಂದಾಗಿದ್ದರೂ, ಸೌದಿ ಅರೇಬಿಯಾ ಮಾತ್ರ ಇರಾನ್ ಆಡಳಿತವನ್ನು ಹತ್ತಿಕ್ಕಲು ವಾಷಿಂಗ್ಟನ್ ಮೇಲೆ ನಿರಂತರ ಒತ್ತಡ ಹೇರುತ್ತಿದೆ ಎಂದು ‘ದಿ ನ್ಯೂಯಾರ್ಕ್ ಟೈಮ್ಸ್’ ವರದಿ ಮಾಡಿದೆ.ವರದಿಯ ಪ್ರಕಾರ, ಸೌದಿ ಕ್ರೌನ್ ಪ್ರಿನ್ಸ್ ಮೊಹಮ್ಮದ್ ಬಿನ್ ಸಲ್ಮಾನ್ (MBS) ಅವರು ಅಮೆರಿಕ ಅಧ್ಯಕ್ಷರೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದಾರೆ. ಇರಾನ್ನ ಇಂಧನ ಮತ್ತು ಪರಮಾಣು ಮೂಲಸೌಕರ್ಯಗಳ ಮೇಲೆ ಮಿಲಿಟರಿ ಒತ್ತಡವನ್ನು ತಗ್ಗಿಸಬಾರದು ಎಂಬುದು ರಿಯಾದ್ನ ಖಾಸಗಿ ನಿಲುವಾಗಿದೆ. ಇರಾನ್ನ ಪ್ರಸ್ತುತ ಆಡಳಿತವನ್ನು ಸಂಪೂರ್ಣವಾಗಿ ಅಸ್ಥಿರಗೊಳಿಸುವವರೆಗೆ ಯಾವುದೇ ಕಾರಣಕ್ಕೂ ದಾಳಿ ನಿಲ್ಲಿಸಬಾರದು ಎಂದು ಸೌದಿ ನಾಯಕತ್ವ ಆಗ್ರಹಿಸುತ್ತಿದೆ ಎಂದು ಮೂಲಗಳು ತಿಳಿಸಿವೆ.
ಸೌದಿ ಅರೇಬಿಯಾ ಕೇವಲ ವೈಮಾನಿಕ ದಾಳಿಗೆ ಮಾತ್ರ ಸೀಮಿತವಾಗದೆ, ಇರಾನ್ನೊಳಗೆ ನೆಲದ ಕಾರ್ಯಾಚರಣೆ ನಡೆಸುವ ಸಾಧ್ಯತೆಗಳ ಬಗ್ಗೆಯೂ ಚರ್ಚಿಸಿದೆ ಎನ್ನಲಾಗಿದೆ. ವಿಶೇಷವಾಗಿ ಇರಾನ್ನ ತೈಲ ರಫ್ತಿನ ಜೀವನಾಡಿಯಾಗಿರುವ ‘ಖಾರ್ಗ್ ದ್ವೀಪ’ (Kharg Island) ವನ್ನು ಗುರಿಯಾಗಿಸಿಕೊಂಡು ದೊಡ್ಡ ಮಟ್ಟದ ದಾಳಿಗೆ ಸೌದಿ ಪಟ್ಟು ಹಿಡಿದಿದೆ. ಒಂದು ವೇಳೆ ಈ ದ್ವೀಪದ ಮೇಲೆ ದಾಳಿ ನಡೆದರೆ, ಅದು ಇರಾನ್ನ ಆರ್ಥಿಕತೆಯನ್ನು ಸಂಪೂರ್ಣವಾಗಿ ಕುಸಿಯುವಂತೆ ಮಾಡುವುದಲ್ಲದೆ, ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಭಾರೀ ಏರುಪೇರಿಗೆ ಕಾರಣವಾಗಲಿದೆ.
ಈ ಆರೋಪಗಳನ್ನು ಸೌದಿ ಅರೇಬಿಯಾ ಸರ್ಕಾರ ಬಲವಾಗಿ ತಳ್ಳಿಹಾಕಿದೆ. “ನಮ್ಮ ಪ್ರದೇಶ ಮತ್ತು ತೈಲ ಮೂಲಸೌಕರ್ಯಗಳನ್ನು ಇರಾನ್ ಪ್ರೇರಿತ ದಾಳಿಗಳಿಂದ ರಕ್ಷಿಸಿಕೊಳ್ಳುವುದು ನಮ್ಮ ಮೊದಲ ಆದ್ಯತೆಯೇ ಹೊರತು, ನಾವು ಯುದ್ಧವನ್ನು ಬಯಸುತ್ತಿಲ್ಲ” ಎಂದು ರಿಯಾದ್ ಅಧಿಕೃತ ಹೇಳಿಕೆ ನೀಡಿದೆ. ಈ ಹಿಂದೆ ಸೌದಿಯ ತೈಲ ಘಟಕಗಳ ಮೇಲೆ ನಡೆದ ಕ್ಷಿಪಣಿ ದಾಳಿಗಳನ್ನು ಉಲ್ಲೇಖಿಸಿರುವ ಅಧಿಕಾರಿಗಳು, ತಾವೇ ಸಂಘರ್ಷದ ಸಂತ್ರಸ್ತರು ಎಂದು ವಾದಿಸಿದ್ದಾರೆ.
