ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಯ ವಾರ್ಡ್ ಸಂಖ್ಯೆ 45ರ ಪಾಂಡೇಶ್ವರ ಅಮೃತನಗರ ಪರಿಸರದಲ್ಲಿ ವಸತಿ ಪ್ರದೇಶದ ಮಧ್ಯೆ ಅನಧಿಕೃತ ಕಾರ್ ಸರ್ವಿಸ್ ಸ್ಟೇಷನ್ ನಿರ್ಮಾಣವಾಗುತ್ತಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಸ್ಥಳೀಯರ ಆರೋಪದ ಪ್ರಕಾರ, ಯಾವುದೇ ಸೂಕ್ತ ವ್ಯವಸ್ಥೆ ಹಾಗೂ ಅಗತ್ಯ ಪರವಾನಿಗೆಗಳಿಲ್ಲದೆ ಇಲ್ಲಿ ಕಾರು, ಲಾರಿ ಸೇರಿದಂತೆ ವಿವಿಧ ವಾಹನಗಳ ವಾಶಿಂಗ್ ಮತ್ತು ಸರ್ವಿಸ್ ಚಟುವಟಿಕೆ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.
ಸಾಮಾನ್ಯವಾಗಿ ವಾಹನ ತೊಳೆಯುವ ಕೇಂದ್ರಗಳಿಗೆ ಅಗತ್ಯವಿರುವ ನೀರಿನ ವ್ಯವಸ್ಥೆ, ತ್ಯಾಜ್ಯ ನೀರಿನ ನಿರ್ವಹಣೆ ಹಾಗೂ ಸಂಬಂಧಪಟ್ಟ ಇಲಾಖೆಗಳ ಅನುಮತಿಗಳ ಬಗ್ಗೆ ಹಲವು ಪ್ರಶ್ನೆಗಳು ಉದ್ಭವಿಸಿವೆ. ಆದರೆ ಇಲ್ಲಿ ಕೊಳವೆ ಬಾವಿ ಅಥವಾ ಇತರ ಸ್ವತಂತ್ರ ನೀರಿನ ವ್ಯವಸ್ಥೆ ಇಲ್ಲದೆ, ದೊಡ್ಡ ಪ್ರಮಾಣದ ಅಂಡರ್ಗ್ರೌಂಡ್ ಸ್ಟೋರೇಜ್ ನಿರ್ಮಿಸಿ ಮಂಗಳೂರು ಮಹಾನಗರ ಪಾಲಿಕೆಯ ನೀರನ್ನು ಬಳಸಲಾಗುತ್ತಿದೆ ಎಂಬುದು ಸ್ಥಳೀಯರ ಆರೋಪವಾಗಿದೆ.
ಇದಲ್ಲದೆ, ವಸತಿ ಪ್ರದೇಶದಲ್ಲಿ ಇಂತಹ ವಾಣಿಜ್ಯ ಚಟುವಟಿಕೆ ನಡೆಸಲು ಕಟ್ಟಡದ ಬಳಕೆ, ವ್ಯಾಪಾರ ಪರವಾನಿಗೆ ಹಾಗೂ ಸ್ಥಳೀಯ ನಿಯಮಗಳ ಪ್ರಕಾರ ಅನುಮತಿ ಇದೆಯೇ ಎಂಬ ಪ್ರಶ್ನೆಯೂ ಸಾರ್ವಜನಿಕರಲ್ಲಿ ಮೂಡಿದೆ.
ಈ ಕುರಿತು ಮಂಗಳೂರು ಮಹಾನಗರ ಪಾಲಿಕೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಮಾಧ್ಯಮದ ಮೂಲಕ ಒತ್ತಾಯಿಸಿದ್ದಾರೆ.
ಈ ವಿಚಾರವಾಗಿ ನಮ್ಮ ವಾಹಿನಿಯಿಂದ ಸಂಬಂಧಪಟ್ಟ ಜೆ.ಇ. ಯತೀಶ್ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿದಾಗ, ನೀರು ಸರಬರಾಜಿಗೆ ಅನುಮತಿ ಕೊಡಬಾರದು ಎಂಬ ನಿಯಮ ಇದೆಯೇ ಎಂಬ ರೀತಿಯಲ್ಲಿ ಉತ್ತರಿಸಿದ್ದಾರೆ.
ಆದರೆ ಇಲ್ಲಿ ಸಾರ್ವಜನಿಕರ ಪ್ರಮುಖ ಪ್ರಶ್ನೆ ಏನೆಂದರೆ, ವಸತಿ ಪ್ರದೇಶದಲ್ಲಿರುವ ಕಟ್ಟಡದಲ್ಲಿ ಕಾರ್ ಸರ್ವಿಸ್ ಸ್ಟೇಷನ್ ನಡೆಸಲು ಕಟ್ಟಡ ಪರವಾನಿಗೆ ಇದೆಯೇ? ವಾಣಿಜ್ಯ ಚಟುವಟಿಕೆ ನಡೆಸಲು ಅನುಮತಿ ನೀಡಲಾಗಿದೆಯೇ? ವಾಹನ ತೊಳೆಯುವ ಉದ್ದೇಶಕ್ಕೆ ಪಾಲಿಕೆಯ ಕುಡಿಯುವ ನೀರು ಬಳಸಲು ಅಧಿಕೃತ ಅನುಮತಿ ಇದೆಯೇ?
ಇನ್ನು ವಾಹನ ಸರ್ವಿಸ್ಗೆ ಬಳಸುವ ಯಂತ್ರೋಪಕರಣಗಳಿಗಾಗಿ ಸಂಬಂಧಪಟ್ಟ ಇಲಾಖೆಯಿಂದ ಅಗತ್ಯ ಪರವಾನಿಗೆ ಪಡೆಯಲಾಗಿದೆಯೇ ಎಂಬುದನ್ನೂ ಅಧಿಕಾರಿಗಳು ಸ್ಪಷ್ಟಪಡಿಸಬೇಕಿದೆ.
ಒಟ್ಟಿನಲ್ಲಿ, ವಾರ್ಡ್ 45ರ ನಿವಾಸಿಗಳಿಗೆ ಕುಡಿಯಲು ಸರಬರಾಜು ಮಾಡಬೇಕಾದ ಮಹಾನಗರ ಪಾಲಿಕೆಯ ನೀರು ವಾಹನಗಳ ವಾಶಿಂಗ್ ಮತ್ತು ಸರ್ವಿಸ್ ಚಟುವಟಿಕೆಗಳಿಗೆ ಬಳಕೆಯಾಗುತ್ತಿದೆಯೇ ಎಂಬ ಗಂಭೀರ ಅನುಮಾನ ಸಾರ್ವಜನಿಕರಲ್ಲಿ ಮೂಡಿದೆ.
ಈ ಎಲ್ಲಾ ಆರೋಪಗಳ ಕುರಿತು ಮಂಗಳೂರು ಮಹಾನಗರ ಪಾಲಿಕೆ ಉತ್ತರಿಸಬೇಕು.















