ಮಂಗಳೂರು ಬಂದರು ಪೆಟ್ರೋಲ್ ಪಂಪ್ನಲ್ಲಿ ಅಕ್ರಮ ಇಂಧನ ದಂಧೆಯ ಆರೋಪ!
ಬ್ಯಾರಲ್ಗಳಲ್ಲಿ ಸಾವಿರಾರು ಲೀಟರ್ ಪೆಟ್ರೋಲ್ ಸಾಗಾಟ- ಅಧಿಕಾರಿಗಳ ಮೌನಕ್ಕೆ ಸಾರ್ವಜನಿಕರ ಪ್ರಶ್ನೆ!
ಮಂಗಳೂರು: ನಗರದ ಬಂದರು ಪ್ರದೇಶದಲ್ಲಿರುವ ಪೆಟ್ರೋಲ್ ಪಂಪ್ವೊಂದರಲ್ಲಿ ಬ್ಯಾರಲ್ಗಳಿಗೆ ಪೆಟ್ರೋಲ್ ತುಂಬಿಸಿ ಸಾವಿರಾರು ಲೀಟರ್ಗಳಷ್ಟು ಇಂಧನವನ್ನು ಸಾಗಾಟ ಮಾಡಲಾಗುತ್ತಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಸಾಮಾನ್ಯವಾಗಿ ಬೈಕ್ ಸವಾರರ ವಾಹನದಲ್ಲಿ ಇಂಧನ ಖಾಲಿಯಾಗಿ ರಸ್ತೆಯ ಮಧ್ಯೆ ಪರದಾಡುವ ಪರಿಸ್ಥಿತಿ ಎದುರಾದಾಗ, ತುರ್ತು ಅಗತ್ಯಕ್ಕಾಗಿ ಒಂದು ಬಾಟಲ್ ಪೆಟ್ರೋಲ್ ಕೇಳಿದರೂ ಪೆಟ್ರೋಲ್ ಪಂಪ್ ಸಿಬ್ಬಂದಿ, “ಬಾಟಲಿಗೆ ಪೆಟ್ರೋಲ್ ನೀಡಲು ಅನುಮತಿ ಇಲ್ಲ” ಎಂದು ನಿರಾಕರಿಸುತ್ತಾರೆ.
ಆದರೆ ಇದೇ ಪಂಪ್ನಲ್ಲಿ ವಾಹನಗಳಲ್ಲಿ ಬರುವವರಿಗೆ ಬ್ಯಾರಲ್ಗಟ್ಟಲೆ ಪೆಟ್ರೋಲ್ ತುಂಬಿಸಿ ನೀಡಲಾಗುತ್ತಿದೆ ಎಂಬ ಆರೋಪ ಸಾರ್ವಜನಿಕರಲ್ಲಿ ಹಲವು ಅನುಮಾನಗಳಿಗೆ ಕಾರಣವಾಗಿದೆ.
ಸಾಮಾನ್ಯ ಗ್ರಾಹಕರಿಗೆ ಒಂದು ಬಾಟಲ್ ಪೆಟ್ರೋಲ್ ನೀಡಲು ನಿಯಮಗಳ ನೆಪ ಹೇಳುವ ಸಿಬ್ಬಂದಿಗೆ, ಬ್ಯಾರಲ್ಗಳಲ್ಲಿ ನೂರಾರು ಲೀಟರ್ ಇಂಧನ ತುಂಬಿಸಿ ನೀಡಲು ಯಾವ ನಿಯಮ ಅನುಮತಿ ನೀಡಿದೆ?
ಇದು ಯಾವ ರೀತಿಯ ವಹಿವಾಟು? ಇಂಧನವನ್ನು ಯಾವ ಉದ್ದೇಶಕ್ಕಾಗಿ ಸಂಗ್ರಹಿಸಲಾಗುತ್ತಿದೆ? ಸಾಗಾಟಕ್ಕೆ ಅಗತ್ಯವಿರುವ ಸುರಕ್ಷತಾ ಕ್ರಮಗಳು ಮತ್ತು ಅಧಿಕೃತ ಅನುಮತಿಗಳನ್ನು ಪಾಲಿಸಲಾಗುತ್ತಿದೆಯೇ?
ಒಂದು ಬಾಟಲ್ ಪೆಟ್ರೋಲ್ಗೆ ನಿರಾಕರಣೆ, ಬ್ಯಾರಲ್ಗಟ್ಟಲೆ ಪೆಟ್ರೋಲ್ಗೆ ಅವಕಾಶವೇ?
ಇದು ಸಾರ್ವಜನಿಕರ ಮುಂದಿರುವ ಪ್ರಮುಖ ಪ್ರಶ್ನೆ.
ಸಂಬಂಧಪಟ್ಟ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ತೂಕ ಮತ್ತು ಅಳತೆ ಇಲಾಖೆ ಹಾಗೂ ಪೊಲೀಸ್ ಅಧಿಕಾರಿಗಳು ತಕ್ಷಣ ಸ್ಥಳ ಪರಿಶೀಲನೆ ನಡೆಸಿ, ಈ ವ್ಯವಹಾರದ ಸತ್ಯಾಸತ್ಯತೆಯನ್ನು ಬಹಿರಂಗಪಡಿಸಬೇಕಿದೆ.
ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ ಈ ಆರೋಪವನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ತನಿಖೆ ನಡೆಸಬೇಕೆಂಬ ಆಗ್ರಹ ಕೇಳಿಬರುತ್ತಿದೆ.















