ಮಂಗಳೂರು: ರಸ್ತೆ ಗುಂಡಿಗಳಿಗೆ ಬಿದ್ದು ಸಾರ್ವಜನಿಕರು ಪ್ರಾಣ ಕಳೆದುಕೊಂಡರೆ ಸಂಬಂಧಪಟ್ಟ ಇಂಜಿನಿಯರ್ಗಳನ್ನೇ ನೇರ ಹೊಣೆಗಾರರನ್ನಾಗಿ ಪರಿಗಣಿಸಲಾಗುವುದು ಎಂಬ ಸಚಿವ ಯು.ಟಿ. ಖಾದರ್ ಅವರ ಕಠಿಣ ಎಚ್ಚರಿಕೆ ರಾಜ್ಯಾದ್ಯಂತ ಗಮನ ಸೆಳೆದಿದೆ. ಈ ಹೇಳಿಕೆಯ ಬಳಿಕ ಮಂಗಳೂರಿನಲ್ಲಿ ನಡೆದಿರುವ ಹಲವು ಅಭಿವೃದ್ಧಿ ಕಾಮಗಾರಿಗಳ ಗುಣಮಟ್ಟ ನೋಡಿದರೆ ಅಧಿಕ ಇಂಜಿನಿಯರ್ಸ್ ಗಳಿಗೆ ಜೈಲೇ ಗತಿ ಎಂದು ಕಾಣಿಸುತ್ತಿದೆ.ನಗರದ ಹಲವು ರಸ್ತೆಗಳಲ್ಲಿ ಇಂದಿಗೂ ದೊಡ್ಡ ದೊಡ್ಡ ಗುಂಡಿಗಳು, ಹಾಳಾದ ಡಾಂಬರು ಮತ್ತು ಮಳೆ ನೀರು ನಿಲ್ಲುವ ಸಮಸ್ಯೆಗಳು ಮುಂದುವರಿದಿವೆ. ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಕಾಮಗಾರಿ ನಡೆದಿದ್ದರೂ, ಕೆಲವೇ ತಿಂಗಳುಗಳಲ್ಲಿ ರಸ್ತೆಗಳು ಹದಗೆಟ್ಟಿರುವ ಪರಿಸ್ಥಿತಿಯಾಗಿದೆ.ಮಂಗಳೂರಿನ ಬಹುತೇಕ ಪ್ರಮುಖ ರಸ್ತೆಗಳ ಸ್ಥಿತಿ ಮಳೆಗಾಲದಲ್ಲಿ ಮತ್ತಷ್ಟು ಹದಗೆಡುತ್ತಿದ್ದು, ದ್ವಿಚಕ್ರ ವಾಹನ ಸವಾರರು ಹಾಗೂ ಪಾದಚಾರಿಗಳಿಗೆ ಅಪಾಯಕಾರಿಯಾಗಿ ಪರಿಣಮಿಸಿದೆ.ಇದರ ಜೊತೆಗೆ ನೆಹರೂ ಮೈದಾನದ ಸಮೀಪ ನಿರ್ಮಾಣಗೊಂಡಿರುವ ಬೃಹತ್ ಟ್ಯಾಂಕ್ ಕಾಮಗಾರಿಯ ಗುಣಮಟ್ಟದ ಬಗ್ಗೆಯೂ ಪ್ರಶ್ನೆಗಳು ಕೇಳಿಬರುತ್ತಿವೆ. ಇದರ ಕಾಮಗಾರಿ ಸಂಪೂರ್ಣ ಕಳಪೆಯಾಗಿದೆ.ನಗರದ ಪ್ರಮುಖ ಸಂಚಾರ ಕೇಂದ್ರವಾದ ಪಂಪ್ವೆಲ್ ಫ್ಲೈಓವರ್ ಕೆಳಭಾಗದಲ್ಲಿ ಪ್ರತೀ ಮಳೆಗಾಲದಲ್ಲೂ ಕೃತಕ ನೆರೆ ಉಂಟಾಗುತ್ತಿರುವುದು ಇಂಜಿನಿಯರ್ ಗಳ ಕಳಪೆ ಕೌಶಲ್ಯವನ್ನು ತೋರಿಸುತ್ತದೆ.ಅದೇ ರೀತಿ ಜಪ್ಪುವಿನಿಂದ ಕಲ್ಲಾಪು ಸಂಪರ್ಕಿಸುವ ರೈಲ್ವೆ ಅಂಡರ್ಪಾಸ್ ಹೊಸ ರಸ್ತೆ ಕಳಪೆ ಕಾಮಗಾರಿಗೆ ಮಾದರಿಯೆ ಆಗಿ ಹೋಗಿದೆ ಇತ್ತೀಚೆಗೆ ಕುಂಟಿಕಾನದಲ್ಲಿ ನಡೆದ ಲಿಫ್ಟ್ ಅವಘಡದ ಬಳಿಕ ನಗರದಲ್ಲಿನ ವಿವಿಧ ನಿರ್ಮಾಣ ಕಾಮಗಾರಿಗಳ ಸುರಕ್ಷತಾ ಮಾನದಂಡಗಳ ಬಗ್ಗೆಯೂ ಪ್ರಶ್ನೆಗಳು ಎದ್ದಿವೆ.ರಸ್ತೆ, ಸೇತುವೆ, ಅಂಡರ್ಪಾಸ್ ಹಾಗೂ ಇತರೆ ಮೂಲಸೌಕರ್ಯ ಯೋಜನೆಗಳಲ್ಲಿ ಗುಣಮಟ್ಟದ ಮೇಲ್ವಿಚಾರಣೆ ನಡೆದರೆ ಅನೇಕ ಇಂಜಿನಿಯರ್ಸ್ ಜೈಲು ಪಾಲಗಲಿದ್ದಾರೆ.
