ಸೆಪ್ಟೆಂಬರ್ 18, 2026 ರಂದು ನಡೆದ ಸಚಿವ ಸಂಪುಟ ಸಭೆಯ ನಿರ್ಣಯದಂತೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಸೆಪ್ಟೆಂಬರ್ 25, 2026 ರಂದು ಈ ಮಹತ್ವದ ನಡವಳಿಯನ್ನು ಪ್ರಕಟಿಸಿದೆ. ಮೊದಲ ಹಂತದಲ್ಲಿ ಆಸ್ಪತ್ರೆಯ ಸಾಮರ್ಥ್ಯವನ್ನು ತಕ್ಷಣವೇ 200 ಹಾಸಿಗೆಗಳಷ್ಟು ಹೆಚ್ಚಿಸಲು ಹಸಿರು ನಿಶಾನೆ ತೋರಲಾಗಿದೆ.
ಸುತ್ತಮುತ್ತಲಿನ 10 ಜಿಲ್ಲೆಗಳು ಹಾಗೂ ಕೇರಳದ ರೋಗಿಗಳಿಗೆ ಆಸರೆ
1848ರಲ್ಲಿ ಸ್ಥಾಪನೆಯಾಗಿ ಸುದೀರ್ಘ ಇತಿಹಾಸ ಹೊಂದಿರುವ ವೆನ್‌ಲಾಕ್ ಜಿಲ್ಲಾ ಆಸ್ಪತ್ರೆಯು, ದಕ್ಷಿಣ ಕನ್ನಡ, ಉಡುಪಿ ಸೇರಿದಂತೆ ಸುತ್ತಮುತ್ತಲಿನ ಸುಮಾರು 10 ಜಿಲ್ಲೆಗಳ ಬಡ ರೋಗಿಗಳಿಗೆ ಪ್ರಮುಖ ಸರ್ಕಾರಿ ರೆಫರಲ್ ಆಸ್ಪತ್ರೆಯಾಗಿ ಸೇವೆ ಒದಗಿಸುತ್ತಿದೆ. ಜೊತೆಗೆ ನೆರೆಯ ಕೇರಳ ರಾಜ್ಯದಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ರೋಗಿಗಳು ಇಲ್ಲಿಗೆ ಚಿಕಿತ್ಸೆಗಾಗಿ ಬರುತ್ತಿದ್ದಾರೆ.
ವೆನ್‌ಲಾಕ್ ಮತ್ತು ಸರ್ಕಾರಿ ಲೇಡಿಗೋಷನ್ ಆಸ್ಪತ್ರೆಗಳು ಕೆಎಂಸಿ ಮಣಿಪಾಲ್ ಆಸ್ಪತ್ರೆಯ ಸಹಭಾಗಿತ್ವದಲ್ಲಿ (MoU) ಒಟ್ಟು 905 ಹಾಸಿಗೆಗಳೊಂದಿಗೆ ಕಾರ್ಯನಿರ್ವಹಿಸುತ್ತಿವೆ. ಇಲ್ಲಿ ಜನರಲ್ ಮೆಡಿಸಿನ್, ಮೂಳೆ ರೋಗ, ಚರ್ಮರೋಗ ಮುಂತಾದ ವಿಭಾಗಗಳಷ್ಟೇ ಅಲ್ಲದೆ ಕಾರ್ಡಿಯಾಲಜಿ ಕ್ಯಾಥ್ ಲ್ಯಾಬ್, ನ್ಯೂರೋ ಸರ್ಜರಿ, ಪೀಡಿಯಾಟ್ರಿಕ್ ಸರ್ಜರಿ, ನೆಫ್ರಾಲಜಿ ಹಾಗೂ ಸಮಗ್ರ ಕ್ಯಾನ್ಸರ್ ಚಿಕಿತ್ಸೆಯಂತಹ ಸೂಪರ್ ಸ್ಪೆಷಾಲಿಟಿ ವಿಭಾಗಗಳು ಅತ್ಯುತ್ತಮ ಸೇವೆ ನೀಡುತ್ತಿವೆ.
ಐಸಿಯು ಮತ್ತು ಬೆಡ್‌ಗಳ ಕೊರತೆಗೆ ಮುಕ್ತಿ
ಹೊರ ಜಿಲ್ಲೆಗಳಿಂದ ವೆಂಟಿಲೇಟರ್ ಹಾಗೂ ಐಸಿಯು (ICU) ಅವಶ್ಯಕತೆ ಇರುವ ಗಂಭೀರ ರೋಗಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿರುವುದರಿಂದ ಆಸ್ಪತ್ರೆಯಲ್ಲಿ ಇತ್ತೀಚೆಗೆ ಐಸಿಯು ವಾರ್ಡ್ ಹಾಗೂ ಸಾಮಾನ್ಯ ಹಾಸಿಗೆಗಳ ತೀವ್ರ ಕೊರತೆ ಉಂಟಾಗಿತ್ತು. ಬೆಡ್ ಸಿಗದೆ ರೋಗಿಗಳು ಪರದಾಡುತ್ತಿರುವ ವಿಚಾರವನ್ನು ಸಾರ್ವಜನಿಕರು ಹಾಗೂ ಜನಪ್ರತಿನಿಧಿಗಳು ಸರ್ಕಾರದ ಗಮನಕ್ಕೆ ತಂದಿದ್ದರು.
ಪ್ರಸ್ತುತ ಲಭ್ಯವಿರುವ 1088 ಹಾಸಿಗೆಗಳ ಜೊತೆಗೆ ನಿರ್ಮಾಣ ಹಂತದಲ್ಲಿರುವ 50 ಹಾಸಿಗೆಗಳ ಸಿಸಿಬಿ (CCB) ಬ್ಲಾಕ್, ₹70 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ ನೂತನ ಒಪಿಡಿ (OPD) ಕಟ್ಟಡದ 320 ಬೆಡ್‌ಗಳು ಹಾಗೂ ಎಂಆರ್‌ಪಿಎಲ್ (MRPL) ಸಿಎಸ್‌ಆರ್ ನಿಧಿಯಡಿ ಮೆಡಿಕಲ್ ಬ್ಲಾಕ್‌ನಲ್ಲಿ ನಿರ್ಮಾಣವಾಗುತ್ತಿರುವ 74 ಹಾಸಿಗೆಗಳು ಸೇರಿದಂತೆ ಆಸ್ಪತ್ರೆಯ ಒಟ್ಟು ಸಾಮರ್ಥ್ಯವು ಭವಿಷ್ಯದಲ್ಲಿ 1,532 ಹಾಸಿಗೆಗಳಿಗೆ ತಲುಪಲಿದೆ.
ಸರ್ಕಾರದ ಆದೇಶ ಮತ್ತು ವಿಧಿಸಲಾದ ಪ್ರಮುಖ ಷರತ್ತುಗಳು
ವೆನ್‌ಲಾಕ್ ಆಸ್ಪತ್ರೆಯನ್ನು ಹಂತ ಹಂತವಾಗಿ 400 ಹಾಸಿಗೆಗಳಿಗೆ ಮೇಲ್ದರ್ಜೆಗೇರಿಸಲು ಸರ್ಕಾರ ಒಪ್ಪಿಗೆ ನೀಡಿದ್ದು, ಕೆಳಗಿನ ಪ್ರಮುಖ ಷರತ್ತುಗಳನ್ನು ವಿಧಿಸಿದೆ:
ಮೊದಲ ಹಂತದಲ್ಲಿ 200 ಬೆಡ್ ವಿಸ್ತರಣೆ: ತಕ್ಷಣಕ್ಕೆ ಜಾರಿಗೆ ಬರುವಂತೆ ಮೊದಲ ಹಂತದಲ್ಲಿ ಸಾಮರ್ಥ್ಯವನ್ನು 200 ಹಾಸಿಗೆಗಳಷ್ಟು ಹೆಚ್ಚಿಸುವುದು.
ಲಭ್ಯವಿರುವ ಬಂಡವಾಳ ಅನುದಾನದ ಬಳಕೆ: ಮೊದಲ ಹಂತದ 200 ಹಾಸಿಗೆಗಳಿಗೆ ಅಗತ್ಯವಿರುವ ಪೀಠೋಪಕರಣ, ವೈದ್ಯಕೀಯ ಉಪಕರಣ ಮತ್ತು ಮೂಲಸೌಕರ್ಯಗಳನ್ನು ಈಗಾಗಲೇ ಬಂಡವಾಳ ವೆಚ್ಚಕ್ಕಾಗಿ ಲಭ್ಯವಿರುವ ಅನುದಾನದಲ್ಲೇ ಕೆಟಿಪಿಪಿ (KTPP) ಕಾಯ್ದೆಯನ್ವಯ ಖರೀದಿಸಬೇಕು.
ಹೆಚ್ಚುವರಿ ಅನುದಾನ ಕೋರುವಂತಿಲ್ಲ: ನಿಗದಿತ ಮೊತ್ತದಲ್ಲೇ ಈ ಕಾಮಗಾರಿ ಮತ್ತು ಸೌಲಭ್ಯಗಳನ್ನು ಪೂರ್ಣಗೊಳಿಸಬೇಕು.
ಮಾನವ ಸಂಪನ್ಮೂಲಕ್ಕೆ ಪ್ರತ್ಯೇಕ ಪ್ರಸ್ತಾವನೆ: ಹೆಚ್ಚುವರಿ 200 ಹಾಸಿಗೆಗಳಿಗೆ ಅಗತ್ಯವಿರುವ ವೈದ್ಯರು, ನರ್ಸ್‌ಗಳು ಹಾಗೂ ಸಿಬ್ಬಂದಿ ನೇಮಕಾತಿಗಾಗಿ ಪ್ರತ್ಯೇಕ ಪ್ರಸ್ತಾವನೆ ಸಲ್ಲಿಸಲು ಸೂಚಿಸಲಾಗಿದೆ.
ಸರ್ಕಾರದ ಈ ನಿರ್ಧಾರದಿಂದ ಕರಾವಳಿ ಹಾಗೂ ಮಲೆನಾಡು ಭಾಗದ ಲಕ್ಷಾಂತರ ಬಡ ರೋಗಿಗಳಿಗೆ ಅತ್ಯಾಧುನಿಕ ಹಾಗೂ ತುರ್ತು ತೀವ್ರ ನಿಗಾ (ICU) ಚಿಕಿತ್ಸೆ ಮತ್ತಷ್ಟು ಸುಲಭವಾಗಿ ಕೈಗೆಟುಕುವಂತಾಗಿದೆ.















