ಮಂಗಳೂರು: ಸ್ಥಳೀಯ ವಾಹಿನಿಯೊಂದರಲ್ಲಿ ಪ್ರಸಾರವಾದ ʼಯಕ್ಷ ತೆಲಿಕೆʼ ಕಾರ್ಯಕ್ರಮ ಸರಣಿಯಲ್ಲಿ ಪ್ರಸಾರವಾದ ʼಬುರುಡೆ ಗ್ಯಾಂಗ್ʼ ಎಂಬ ಯಕ್ಷ ಪ್ರಹಸನಕ್ಕೆ ಸಂಬಂಧಿಸಿ ಮಹೇಶ್ ಶೆಟ್ಟಿ ತಿಮರೋಡಿ ಎಂಬವರು ಕರೆ ಮಾಡಿ ಅವಾಚ್ಯವಾಗಿ ನಿಂದಿಸಿದ್ದಾರೆ. ಅವರ ವಿರುದ್ಧ ಪುತ್ತೂರು ಗ್ರಾಮಾಂತರ ಠಾಣೆಗೆ ಮತ್ತು ಮಹಿಳಾ ಠಾಣೆಗೆ ದೂರು ನೀಡಲಾಗಿದೆ ಎಂದು ಯಕ್ಷಗಾನ ಕಲಾವಿದರಾದ ಸುಂದರ ರೈ ಮಂದಾರ, ಪ್ರಜ್ವಲ್ ಕುಮಾರ್ ಮತ್ತು ದಿನೇಶ್ ಕೊಡಪದವು ಹೇಳಿದರು.
ಶುಕ್ರವಾರ ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸುಂದರ ರೈ ಮಂದಾರ, ಈ ಕಾರ್ಯಕ್ರಮ ಕಳೆದ ವರ್ಷದ ನವೆಂಬರ್ ತಿಂಗಳಲ್ಲಿ ಪ್ರಸಾರವಾಗಿತ್ತು. ಎ.11ರಂದು ಮಹೇಶ್ ಶೆಟ್ಟಿ ತಿಮರೋಡಿ ಎಂಬವರು ಪ್ರಜ್ವಲ್ ಕುಮಾರ್ ಗೆ ಕರೆ ಮಾಡಿ ಅವಾಚ್ಯವಾಗಿ ನಿಂದಿಸಿದ್ದಾರೆ. ತಾಯಿಯ ಬಗ್ಗೆಯೂ ಕೆಟ್ಟದಾಗಿ ಮಾತನಾಡಿದ್ದಾರೆ. ಹೀಗಾಗಿ ಅವರು ಮಹಿಳಾ ಠಾಣೆಗೆ ದೂರು ನೀಡಿದ್ದಾರೆ. ನನ್ನ ಬಗ್ಗೆಯೂ ಇಲ್ಲ ಸಲ್ಲದ ಆರೋಪಗಳನ್ನು ಮಾಡಿದ್ದು ಅದರ ವಿರುದ್ಧ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದೇನೆ ಎಂದರು.
ಪ್ರಜ್ವಲ್ ಕುಮಾರ್ ಮಾತನಾಡಿ, ಒಂದು ಹೆಣ್ಣಿಗೆ ನ್ಯಾಯಕ್ಕಾಗಿ ಹೋರಾಟ ಮಾಡುವ ವ್ಯಕ್ತಿ ಅದೇ ನೆಪದಲ್ಲಿ ಬೇರೆ ಹೆಣ್ಣುಮಕ್ಕಳ ಬಗ್ಗೆ ಅವಾಚ್ಯವಾಗಿ ನಿಂದಿಸುವುದು ಸರಿಯೇ ಎಂದು ಪ್ರಶ್ನಿಸಿದರು.
ನಾವು ಮಾಡಿರುವ ಪ್ರಸಹನಕ್ಕೂ ಇಲ್ಲಿನ ಹೋರಾಟಗಳಿಗೂ ಯಾವುದೇ ಸಂಬಂಧವಿಲ್ಲ. ಆದರೆ ಅವರು ಅದನ್ನು ತಮಗೆ ತಾವೇ ಜೋಡಿಸಿಕೊಂಡು ನಮ್ಮ ವಿರುದ್ಧ ಆರೋಪ ಮಾಡುತ್ತಿದ್ದಾರೆ. ನಮಗೆ ಕಾನೂನಿನ ಮೇಲೆ ಗೌರವವಿದ್ದು, ನ್ಯಾಯ ದೊರೆಯುತ್ತದೆ ಎನ್ನುವ ವಿಶ್ವಾಸವಿದೆ ಎಂದರು.
ದಿನೇಶ್ ಕೊಡಪದವು ಮಾತನಾಡಿ, ಯಕ್ಷ ಪ್ರಹಸನ ಪ್ರಸಾರವಾಗಿ ಆರು ತಿಂಗಳು ಕಳೆದಿದೆ. ಸಾಮಾಜಿಕ ಜಾಲತಾಣದ ಮೂಲಕ ಸಾಕಷ್ಟು ಬೆದರಿಕೆಗಳು ಬಂದಿವೆ. ಆದರೆ ನಾವು ಅದರ ಬಗ್ಗೆ ತಲೆ ಕೆಡಿಸಿಕೊಂಡಿರಲಿಲ್ಲ. ಬುರುಡೆ ಗ್ಯಾಂಗ್ ಎಂದರೆ ಅವರಿಗೆ ಕೋಪ ಬರುತ್ತದೆ ಎಂದಾದರೆ ಅವರು ಗ್ಯಾಂಗ್ ನ ಸದಸ್ಯರೆಂದೇ ಅರ್ಥಮಾಡಿಕೊಳ್ಳಬೇಕಾಗುತ್ತದೆ ಎಂದರು.
ಭಾಗವತರಾದ ಧೀರಜ್ ರೈ ಸಂಪಾಜೆ ಉಪಸ್ಥಿತರಿದ್ದರು.
