ಸರ್ಕಾರಿ ವಾಹನಗಳ ದುರುಪಯೋಗ ತಡೆಯಲು ಮತ್ತು ಅನಗತ್ಯ ವೆಚ್ಚಕ್ಕೆ ಕಡಿತಗೊಳಿಸಲು ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಹಿರಿಯ ಅಧಿಕಾರಿಗಳಿಗೆ ಇನ್ಮುಂದೆ ‘ಒಬ್ಬ ಅಧಿಕಾರಿಗೆ ಒಂದೇ ಸರ್ಕಾರಿ ಕಾರು’ (One Officer, One Official Car) ನೀತಿಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗಿದೆ.
ಹಣಕಾಸು ಸಚಿವಾಲಯದ ವ್ಯಾಪ್ತಿಗೆ ಬರುವ ವೆಚ್ಚ ಇಲಾಖೆ (Department of Expenditure) ಈ ಕುರಿತು ಅಧಿಕೃತ ಜ್ಞಾಪನಾ ಪತ್ರ (Office Memorandum) ಹೊರಡಿಸಿದ್ದು, ಎಲ್ಲಾ ಕೇಂದ್ರ ಸಚಿವಾಲಯಗಳು ಮತ್ತು ಇಲಾಖೆಗಳಿಗೆ ನೂತನ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ನಿರ್ದೇಶನ ನೀಡಿದೆ.
ನಿಯಮಗಳ ಪ್ರಮುಖ ಮುಖ್ಯಾಂಶಗಳು:
ಹೆಚ್ಚುವರಿ ಜವಾಬ್ದಾರಿ ಇದ್ದರೂ ಒಂದೇ ಕಾರು: ಒಬ್ಬ ಅಧಿಕಾರಿಗೆ ಬೇರೆ ಸಚಿವಾಲಯ, ಇಲಾಖೆ, ಸಾರ್ವಜನಿಕ ವಲಯದ ಉದ್ಯಮ (PSU) ಅಥವಾ ಸ್ವಾಯತ್ತ ಸಂಸ್ಥೆಯ ಹೆಚ್ಚುವರಿ ಉಸ್ತುವಾರಿ (Additional Charge) ನೀಡಿದ್ದರೂ ಸಹ, ಅವರಿಗೆ ಮತ್ತೊಂದು ಹೆಚ್ಚುವರಿ ಕಾರನ್ನು ನೀಡುವಂತಿಲ್ಲ. ಅವರು ತಮಗೆ ಈಗಾಗಲೇ ಹಂಚಿಕೆಯಾಗಿರುವ ಒಂದೇ ಕಾರನ್ನು ಬಳಸಬೇಕಾಗುತ್ತದೆ.
ಸಂಸ್ಥೆಗಳ ವಾಹನ ಬಳಕೆಗೆ ನಿಷೇಧ: ಅಧಿಕೃತ ಪ್ರವಾಸ ಅಥವಾ ಸರ್ಕಾರಿ ಕರ್ತವ್ಯದ ಸಮಯವನ್ನು ಹೊರತುಪಡಿಸಿ, ಅಧಿಕಾರಿಗಳು ಪಿಎಸ್ಯು ಅಥವಾ ಸ್ವಾಯತ್ತ ಸಂಸ್ಥೆಗಳಿಗೆ ಸೇರಿದ ವಾಹನಗಳನ್ನು ಬಳಸುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ಹೆಚ್ಚುವರಿ ವಾಹನಗಳ ಸುರಕ್ಷತೆ: ಯಾವುದೇ ಸಚಿವಾಲಯಗಳಲ್ಲಿ ಬಳಸದೇ ಉಳಿದಿರುವ ಅಥವಾ ಹೆಚ್ಚುವರಿಯಾಗಿರುವ ವಾಹನಗಳು ಖಾಸಗಿ ಅಥವಾ ಅನಧಿಕೃತ ಬಳಕೆಯಾಗದಂತೆ ಅವುಗಳನ್ನು ಸುರಕ್ಷಿತವಾಗಿ ಕಸ್ಟಡಿಯಲ್ಲಿಡಲು ಸೂಚಿಸಲಾಗಿದೆ.
