ಕೇವಲ ಒಬ್ಬ ಸಾಮಾನ್ಯ ಬಸ್ ಚಾಲಕನ ಮನೆಯಲ್ಲಿ ಸಿಕ್ಕ ಸಂಪತ್ತು ಕಂಡು ತನಿಖಾಧಿಕಾರಿಗಳೇ ಶಾಕ್ ಆಗಿದ್ದಾರೆ. ಪೊಲೀಸರು ಈ ಬೃಹತ್ ಪ್ರಮಾಣದ ಕಪ್ಪು ಹಣ ಮತ್ತು ಚಿನ್ನವನ್ನು ವಶಪಡಿಸಿಕೊಳ್ಳಲು 5 ದೊಡ್ಡ ಕಬ್ಬಿಣದ ಪೆಟ್ಟಿಗೆಗಳು, 5 ನೋಟು ಎಣಿಕೆ ಯಂತ್ರಗಳು ಹಾಗೂ ಹಲವು ಗಂಟೆಗಳ ಕಾಲ ಶ್ರಮಿಸಬೇಕಾಯಿತು.
35 ಚೀಲಗಳಲ್ಲಿ ಸಿಕ್ಕಿತು 20 ಕೋಟಿ ಕ್ಯಾಶ್, 15 ಕೆಜಿ ಬಂಗಾರ!
ವರದಿಯ ಪ್ರಕಾರ, ಕೋಲ್ಕತ್ತಾ ಕಲ್ಲು ವ್ಯಾಪಾರಿ ಟುಲು ಮಂಡಲ್ ಅವರ ಭಾವ (ಪತ್ನಿಯ ಸಹೋದರ) ಹಾಗೂ ಮಾಜಿ ಸರ್ಕಾರಿ ಬಸ್ ಚಾಲಕನಾಗಿದ್ದ ಮೀನಾರ್ ಮಂಡಲ್ ಎಂಬುವವರ ಮನೆಯಲ್ಲಿ ಭಾರೀ ಸಂಪತ್ತು ಪತ್ತೆಯಾಗಿದೆ.
ರಹಸ್ಯ ಮಾಹಿತಿಯನ್ನಾಧರಿಸಿ ಪೊಲೀಸರು ಜುಲೈ 28ರ ತಡರಾತ್ರಿ ದೇವಚಾ ಪ್ರದೇಶದಲ್ಲಿರುವ ಮೀನಾರ್ ಮನೆಗೆ ದಿಢೀರ್ ದಾಳಿ ನಡೆಸಿದ್ದರು. ಈ ವೇಳೆ ಮನೆ ಪರಿಶೀಲಿಸಿದಾಗ ಸುಮಾರು 35 ಚೀಲಗಳಲ್ಲಿ ತುಂಬಿಡಲಾಗಿದ್ದ 15 ಕೆಜಿ ಚಿನ್ನದ ಬಿಸ್ಕತ್ತುಗಳು ಹಾಗೂ 20 ಕೋಟಿ ರೂಪಾಯಿ ನಗದು ಹಣ ಪತ್ತೆಯಾಗಿದೆ.
ಯಂತ್ರಗಳಿಂದ ಎಣಿಕೆ, ಪೆಟ್ಟಿಗೆಗಳಲ್ಲಿ ಭದ್ರತೆ
ಸಾಮಾನ್ಯವಾಗಿ ಬಸ್ ಚಾಲಕನೊಬ್ಬನಿಗೆ ಕುಟುಂಬದ ದಿನನಿತ್ಯದ ವೆಚ್ಚ ತೂಗಿಸುವುದೇ ಕಷ್ಟ. ಅಂತಹದ್ದರಲ್ಲಿ ಮೀನಾರ್ ಮನೆಯಲ್ಲಿ ಸಿಕ್ಕ ಅಗಾಧ ಸಂಪತ್ತನ್ನು ಕಂಡು ಪೊಲೀಸರು ದಬ್ಬಾಳಿಕೆಯಿಂದ ಬೆಚ್ಚಿಬಿದ್ದರು.
ವಶಪಡಿಸಿಕೊಂಡ ನಗದನ್ನು ಎಣಿಸಲು ತಕ್ಷಣವೇ 5 ನೋಟು ಎಣಿಸುವ ಯಂತ್ರಗಳನ್ನು ತರಿಸಲಾಯಿತು. ಗಂಟೆಗಟ್ಟಲೆ ಯಂತ್ರಗಳ ಸದ್ದಿನ ನಡುವೆ ನೋಟುಗಳ ಎಣಿಕೆ ಕಾರ್ಯ ನಡೆಯಿತು. ತದನಂತರ ಈ ಇಡೀ ‘ಖಜಾನೆ’ಯನ್ನು ಸುರಕ್ಷಿತವಾಗಿ ಒಯ್ಯಲು 5 ಬೃಹತ್ ಟಿನ್/ಕಬ್ಬಿಣದ ಬಕ್ಸ್‌ಗಳನ್ನು ಬಳಸಲಾಯಿತು.
ಕಲ್ಲು ಗಣಿಗಾರಿಕೆಯ ಕಪ್ಪು ದಂಧೆ ಬಯಲು
ಒಬ್ಬ ಮಾಜಿ ಬಸ್ ಚಾಲಕನ ಬಳಿ ಇಷ್ಟೊಂದು ಕೋಟ್ಯಂತರ ಹಣ ಹೇಗೆ ಬಂತು ಎಂಬ ಪ್ರಶ್ನೆಗೆ ಉತ್ತರ ಹುಡುಕಿದಾಗ ಬೃಹತ್ ಅಕ್ರಮದ ಜಾಲ ಬಯಲಾಗಿದೆ. ಪೊಲೀಸರ ಪ್ರಕಾರ, ಈ ಪ್ರಕರಣದ ಮೂಲ ಕಲ್ಲು ಉದ್ಯಮದ ಅಕ್ರಮ ದಂಧೆಗೆ ಸಂಬಂಧಿಸಿದೆ. ಆರೋಪಿ ಟುಲು ಮಂಡಲ್ ಅವರ ಏಜೆನ್ಸಿಯು ಮೂರು ಜಿಲ್ಲೆಗಳ ಕಲ್ಲು ಉದ್ಯಮದ ಎಂಟ್ರಿ ಗೇಟ್‌ಗಳಿಂದ ತೆರಿಗೆ ವಸೂಲಿ ಮಾಡುವ ಜವಾಬ್ದಾರಿ ಹೊಂದಿತ್ತು.ಈ ಉದ್ಯಮದಿಂದ ಸರ್ಕಾರಕ್ಕೆ ಪ್ರತಿ ತಿಂಗಳು ₹83 ಕೋಟಿ ಆದಾಯ ಬರಬೇಕಿತ್ತು. ಆದರೆ ಸರ್ಕಾರಿ ಲೆಕ್ಕಕ್ಕೆ ತೋರಿಸುತ್ತಿದ್ದದ್ದು ಕೇವಲ ₹2 ರಿಂದ ₹5 ಕೋಟಿ ಮಾತ್ರ! ಉಳಿದ ಬಹುಪಾಲು ಕಪ್ಪು ಹಣವೇ ಮೀನಾರ್ ಮನೆಯ 35 ಚೀಲಗಳಲ್ಲಿ ಅಡಗಿತ್ತು. ಸದ್ಯ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ಭ್ರಷ್ಟಾಚಾರದ ವಿಸ್ತೃತ ತನಿಖೆ ಕೈಗೊಂಡಿದ್ದು, ಈ ಹಣ ಮತ್ತು ಚಿನ್ನದ ಮೂಲ ಹಾಗೂ ಇತರ ಆರ್ಥಿಕ ಅಕ್ರಮಗಳ ಜಾಲವನ್ನು ಜಾಲಾಡುತ್ತಿದ್ದಾರೆ.
