ಹೊಸದಾಗಿ ನಿರ್ಮಿಸಿದ ಮನೆಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಸರ್ಕಾರಿ ನಿಯಮಿತ ಶುಲ್ಕದ ಹೊರತಾಗಿಯೂ ಭಾರಿ ಲಂಚಕ್ಕೆ ಬೇಡಿಕೆಯಿಟ್ಟಿದ್ದ ಸೆಸ್ಕಾಂ ಸಹಾಯಕ ಎಂಜಿನಿಯರ್ (AE) ಒಬ್ಬರು ಈಗ ಲೋಕಾಯುಕ್ತ ಪೊಲೀಸರ ಅತಿಥಿಯಾಗಿದ್ದಾರೆ.
ಮಂಡ್ಯದ ಸೆಸ್ಕಾಂ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಶ್ರೀನಿವಾಸ್ ಬಂಧಿತ ಅಧಿಕಾರಿಯಾಗಿದ್ದು, ದೂರುದಾರರಿಂದ ಮುಂಗಡ ಹಣ ಪಡೆಯುತ್ತಿದ್ದ ವೇಳೆ ಅಧಿಕಾರಿಗಳು ಮಿಂಚಿನ ದಾಳಿ ನಡೆಸಿ ರೆಡ್ಹ್ಯಾಂಡ್ ಆಗಿ ವಶಕ್ಕೆ ಪಡೆದಿದ್ದಾರೆ.
ಸಾರ್ವಜನಿಕರೊಬ್ಬರು ತಮ್ಮ ನೂತನ ಮನೆಗೆ ವಿದ್ಯುತ್ ಸಂಪರ್ಕ ನೀಡುವಂತೆ ಕೋರಿ ಅರ್ಜಿ ಸಲ್ಲಿಸಿದ್ದರು. ಆದರೆ, ನಿಯಮಾನುಸಾರ ಪಾವತಿಸಬೇಕಾದ ಅಭಿವೃದ್ಧಿ ಶುಲ್ಕದ ಹೊರತಾಗಿಯೂ ಕೆಲಸ ಮಾಡಿಕೊಡಲು ಎಇ ಶ್ರೀನಿವಾಸ್ ಬರೋಬ್ಬರಿ ₹75,000 ಲಂಚ ನೀಡುವಂತೆ ಪಟ್ಟು ಹಿಡಿದಿದ್ದರು. ಅಧಿಕಾರಿಯ ಕಿರುಕುಳದಿಂದ ಬೇಸತ್ತ ದೂರುದಾರರು, ಕೊನೆಗೆ ಹಣ ನೀಡಲು ಒಪ್ಪಿದಂತೆ ನಟಿಸಿ ಲೋಕಾಯುಕ್ತ ಅಧಿಕಾರಿಗಳ ದೂರು ನೀಡಿದ್ದರು.
ದೂರು ಸ್ವೀಕರಿಸಿದ ಲೋಕಾಯುಕ್ತ ತಂಡವು ಪಕ್ಕಾ ಯೋಜನೆ ರೂಪಿಸಿ ಕಾರ್ಯಾಚರಣೆಗೆ ಸಜ್ಜಾಗಿತ್ತು. ಅದರಂತೆ ದೂರುದಾರರಿಂದ ₹30,000 ಮುಂಗಡ ಲಂಚ ಸ್ವೀಕರಿಸುತ್ತಿದ್ದ ವೇಳೆಯಲ್ಲೇ ಲೋಕಾಯುಕ್ತ ಇನ್ಸ್ಪೆಕ್ಟರ್ ಬ್ಯಾಟರಾಯಗೌಡ ಅವರ ನೇತೃತ್ವದ ತಂಡ ದಾಳಿ ನಡೆಸಿ ಎಇ ಶ್ರೀನಿವಾಸ್ ಅವರನ್ನು ಲಂಚದ ಹಣದ ಸಮೇತ ವಶಕ್ಕೆ ಪಡೆಯಿತು. ಸದ್ಯ ಆರೋಪಿಯನ್ನು ಬಂಧಿಸಿರುವ ಲೋಕಾಯುಕ್ತ ಪೊಲೀಸರು, ಪ್ರಕರಣದ ಮುಂದಿನ ತನಿಖೆಯನ್ನು ತೀವ್ರಗೊಳಿಸಿದ್ದಾರೆ.
