ಬಂಟ್ವಾಳ: ಪೆರುವಾಯಿ ಗ್ರಾಮದ ಎರಡು ಪ್ರಮುಖ ಸೇತುವೆಗಳ ದುಸ್ಥಿತಿ ಸಾರ್ವಜನಿಕರಲ್ಲಿ ತೀವ್ರ ಆತಂಕ ಮೂಡಿಸಿದೆ.
ಪೆರುವಾಯಿಯಿಂದ ಮಾಣಿಲಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ ಶಿಥಿಲಾವಸ್ಥೆಗೆ ತಲುಪಿದ್ದು, ಕೇರಳಕ್ಕೆ ಸಂಪರ್ಕ ಕಲ್ಪಿಸುವ ಮತ್ತೊಂದು ಸೇತುವೆಯೂ ಶಿಥಿಲಾವಸ್ಥೆಯಲ್ಲಿರುವುದರ ಜೊತೆಗೆ ಅತ್ಯಂತ ಕಿರಿದಾಗಿರುವ ಕಾರಣ ಹಲವು ವರ್ಷಗಳಿಂದ ಅಪಘಾತಗಳಿಗೆ ಕಾರಣವಾಗುತ್ತಿದೆ. ಈಗಾಗಲೇ ಹತ್ತಾರು ಅಪಘಾತಗಳು ಸಂಭವಿಸಿದ್ದರೂ, ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಲು ಯಾವುದೇ ಪರಿಣಾಮಕಾರಿ ಕ್ರಮ ಕೈಗೊಳ್ಳದಿರುವುದು ವಿಷಾದನೀಯ.
ಪ್ರತಿನಿತ್ಯ ನೂರಾರು ವಾಹನಗಳು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಈ ಮಾರ್ಗಗಳನ್ನು ಅವಲಂಬಿಸಿದ್ದು, ಯಾವುದೇ ಕ್ಷಣದಲ್ಲಿ ಸೇತುವೆ ಕುಸಿದು ದೊಡ್ಡ ಅನಾಹುತ ಸಂಭವಿಸುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಜನರ ಜೀವ ಮತ್ತು ಸುರಕ್ಷತೆಯ ಪ್ರಶ್ನೆಯಾಗಿರುವ ಈ ಸಮಸ್ಯೆಯನ್ನು ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಗಂಭೀರವಾಗಿ ಪರಿಗಣಿಸಿ, ತಕ್ಷಣ ಸ್ಥಳ ಪರಿಶೀಲನೆ ನಡೆಸಿ ಶಾಶ್ವತ ಪರಿಹಾರ ಒದಗಿಸಬೇಕು. ಇಲ್ಲವಾದಲ್ಲಿ ಸಾರ್ವಜನಿಕರ ಸುರಕ್ಷತೆಯ ಹಿತದೃಷ್ಟಿಯಿಂದ ಸ್ಥಳೀಯರು ಸಂಘಟಿತರಾಗಿ ಹೋರಾಟದ ಹಾದಿ ಹಿಡಿಯಬೇಕಾದ ಅನಿವಾರ್ಯತೆ ಎದುರಾಗಲಿದೆ ಎಂದು ಸಾರ್ವಜನಿಕರ ಆಕ್ರೋಶ.
