ಮಂಗಳೂರಿನ ಸಿಟಿ ಸೆಂಟರ್ ಮಾಲ್ನಲ್ಲಿರುವ KFC ಔಟ್ಲೆಟ್ನಲ್ಲಿ ಕೊಳೆತ ಚಿಕನ್ ನೀಡಲಾಗಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಪರಿಶೀಲನೆ ವೇಳೆ ಹಲವು ತಿಂಗಳ ಹಿಂದೆ ಪ್ಯಾಕ್ ಮಾಡಲಾಗಿದ್ದ ಚಿಕನ್ ಮಾಂಸ ಪತ್ತೆಯಾಗಿದೆ ಎಂದು ವರದಿ ತಿಳಿಸಿದೆ.

ಅಧಿಕಾರಿಗಳು ಮೂರು ಮಾದರಿಯ ಚಿಕನ್ ಹಾಗೂ ಬಳಸಲಾಗುತ್ತಿದ್ದ ಎಣ್ಣೆಯ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ. ಪರಿಶೀಲನೆಯ ಬಳಿಕ KFC ಔಟ್ಲೆಟ್ನ್ನು ಬಂದ್ ಮಾಡಲಾಗಿದೆ. ಪ್ರಯೋಗಾಲಯದ ವರದಿ ಬಂದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಆಹಾರ ಸುರಕ್ಷತಾ ಅಧಿಕಾರಿಗಳು ತಿಳಿಸಿದ್ದಾರೆ.















