ದಾವಣಗೆರೆ: ಜಿಲ್ಲೆಯ ಚನ್ನಗಿರಿ ತಾಲೂಕಿನಲ್ಲಿ ತಡರಾತ್ರಿ ಭೀಕರ ಕೊಲೆಯೊಂದು ಸಂಭವಿಸಿದೆ. ಹಳೆ ದ್ವೇಷ ಅಥವಾ ಯುವತಿಯ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಗ್ರಾಮ ಪಂಚಾಯತಿ ಸದಸ್ಯನನ್ನು ತಂದೆ ಮತ್ತು ಮಗ ಸೇರಿ ಮಚ್ಚಿನಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿದ್ದಾರೆ.
ಚನ್ನಗಿರಿ ತಾಲೂಕಿನ ನಲ್ಲೂರು ಕ್ಯಾಂಪ್ ನಿವಾಸಿ, ಮಾಜಿ ಗ್ರಾಮ ಪಂಚಾಯತಿ ಸದಸ್ಯ ಆತಾಉಲ್ಲಾ (43) ಕೊಲೆಯಾದ ದುರ್ದೈವಿ. ಬುಧವಾರ ತಡರಾತ್ರಿ ಆತಾಉಲ್ಲಾ ಅವರು ಸ್ಥಳೀಯ ಬೇಕರಿಯೊಂದರ ಬಳಿ ನಿಂತಿದ್ದಾಗ, ಹಿಂಬದಿಯಿಂದ ಬಂದ ಆರೋಪಿಗಳು ಏಕಾಏಕಿ ಮಚ್ಚಿನಿಂದ ದಾಳಿ ನಡೆಸಿದ್ದಾರೆ. ಮೈಮೇಲೆ ಮನಬಂದಂತೆ ಹಲ್ಲೆ ನಡೆಸಿದ್ದರಿಂದ ತೀವ್ರ ರಕ್ತಸ್ರಾವವಾಗಿ ಆತಾಉಲ್ಲಾ ಅವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.
