ಉದ್ಯಮಿಯೊಬ್ಬರಿಂದ ಬರೋಬ್ಬರಿ 1 ಕೋಟಿ ರೂಪಾಯಿ ಲಂಚ ಪಡೆದಿರುವ ಆರೋಪ ಡೈರೆಕ್ಟರೇಟ್ ಜನರಲ್ ಆಫ್ ಜಿಎಸ್ಟಿ ಇಂಟೆಲಿಜೆನ್ಸ್ (DGGI) ಹಿರಿಯ ಅಧಿಕಾರಿಯೊಬ್ಬರ ವಿರುದ್ಧ ಕೇಳಿಬಂದಿದ್ದು, ಕೇಂದ್ರೀಯ ತನಿಖಾ ದಳ (CBI) ಭ್ರಷ್ಟಾಚಾರದ ಪ್ರಕರಣ ದಾಖಲಿಸಿದೆ.
ಜಿಎಸ್ ಟಿ ಅಧಿಕಾರಿ 21 ಕೋಟಿ ರೂಪಾಯಿ ಮೌಲ್ಯದ ಜಿಎಸ್ಟಿ ವಂಚನೆ ಪ್ರಕರಣವನ್ನು ಮುಚ್ಚಿಹಾಕಲು ಮೈಸೂರಿನ ಉದ್ಯಮಿಯೊಬ್ಬರಿಂದ ಬರೋಬ್ಬರಿ 1 ಕೋಟಿ ರೂಪಾಯಿ ಲಂಚ ಪಡೆದಿದ್ದಾರೆ ಎಂದು ಆರೋಪಿಸಲಾಗಿದೆ.
ಬೆಂಗಳೂರಿನ ಕೇಂದ್ರ ಜಿಎಸ್ಟಿ ಘಟಕದ ಸೀನಿಯರ್ ಇಂಟೆಲಿಜೆನ್ಸ್ ಆಫೀಸರ್ ಪ್ರವೀಣ್ ಕುಮಾರ್ ಯಾದವ್ ಈ ಪ್ರಕರಣದ ಮುಖ್ಯ ಆರೋಪಿಯಾಗಿದ್ದು, ಸದ್ಯ ಅವರನ್ನು ಅಮಾನತುಗೊಳಿಸಲಾಗಿದೆ. ಅವರು ಮೈಸೂರಿನ ಗುಜರಿ ಉದ್ಯಮಿ ಮೊಹಮ್ಮದ್ ಕಮ್ರಾನ್ (24) ಎಂಬುವವರಿಂದ 2025ರಲ್ಲಿ 1 ಕೋಟಿ ರೂ. ಲಂಚ ಪಡೆದಿದ್ದರು ಎನ್ನಲಾಗಿದೆ. ಎಫ್ಐಆರ್ ಪ್ರಕಾರ, 2025ರ ಸೆಪ್ಟೆಂಬರ್ 10ರಂದು ಉದ್ಯಮಿ ಕಮ್ರಾನ್ ಮನೆಯ ಮೇಲೆ ಜಿಎಸ್ಟಿ ಅಧಿಕಾರಿಗಳು ದಾಳಿ ನಡೆಸಿದ್ದರು.
ಈ ವೇಳೆ ಪ್ರವೀಣ್ ಕುಮಾರ್ ಯಾದವ್ ಪ್ರಕರಣದಿಂದ ಪಾರು ಮಾಡಲು 1 ಕೋಟಿ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಅದೇ ದಿನ ರಾತ್ರಿ 9:30 ರ ಸುಮಾರಿಗೆ ವಾಟ್ಸಾಪ್ ಮೂಲಕ ಲೊಕೇಶನ್ ಕಳುಹಿಸಿ, ಮೈಸೂರಿನ ಪಾರ್ಕ್ಲೇನ್ ಹೋಟೆಲ್ ಬಳಿ ಹಣ ತರುವಂತೆ ಸೂಚಿಸಿದ್ದರು. ಕಮ್ರಾನ್ ತನ್ನ ಸ್ನೇಹಿತನೊಂದಿಗೆ ಹೋಗಿ 1 ಕೋಟಿ ರೂ. ನಗದು ಇದ್ದ ಬಾಕ್ಸ್ ಅನ್ನು ಅಧಿಕಾರಿಗೆ ಹಸ್ತಾಂತರಿಸಿದ್ದರು. ಆದರೆ, ಮರುದಿನವೇ ಪ್ರವೀಣ್ ಯಾದವ್ ಮತ್ತೊಮ್ಮೆ ವಾಟ್ಸಾಪ್ ಕರೆ ಮಾಡಿ, ಕೇಸ್ ಕ್ಲೋಸ್ ಮಾಡಲು ಹೆಚ್ಚುವರಿಯಾಗಿ 4 ಕೋಟಿ ರೂಪಾಯಿಗೆ ಬೇಡಿಕೆ ಇಟ್ಟಿದ್ದರು ಎಂದು ಕಮ್ರಾನ್ ದೂರಿನಲ್ಲಿ ತಿಳಿಸಿದ್ದಾರೆ.
