ಸುಮಾರು 17ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಭಾಗಿಯಾಗಿ, ಕಳೆದ ನಾಲ್ಕು ವರ್ಷಗಳಿಂದ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಅಂತರ್ ಜಿಲ್ಲಾ ಆರೋಪಿಯನ್ನು ಮೂಡಬಿದಿರೆ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಮೂಡಬಿದ್ರೆ ತಾಲೂಕಿನ ತೆಂಕ ಮಿಜಾರು ಗ್ರಾಮದ ಅರ್ಗ ನಿವಾಸಿ ಕೆ. ಅಬ್ದುಲ್ ಬಶೀರ್ (50) ಅಲಿಯಾಸ್ ಅರ್ಗ ಬಶೀರ್ ಎಂದು ಗುರುತಿಸಲಾಗಿದೆ. ದಕ್ಷಿಣ ಕನ್ನಡ ಮತ್ತು ಚಿಕ್ಕಮಗಳೂರು ಜಿಲ್ಲೆಗಳ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಒಟ್ಟು 17 ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿದ್ದನು. ಈ ಪ್ರಕರಣಗಳಿಗೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದ್ದರೂ, ಕಳೆದ 4 ವರ್ಷಗಳಿಂದ ಈತ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದನು.
ಪೊಲೀಸರಿಂದ ತಪ್ಪಿಸಿಕೊಳ್ಳಲು ಆರೋಪಿ ತನ್ನ ಮೂಲ ಸ್ಥಳವಾದ ತೆಂಕ ಮಿಜಾರಿನ ಅರ್ಗ ಮನೆಯನ್ನು ಕುಟುಂಬ ಸಮೇತ ಖಾಲಿ ಮಾಡಿದ್ದನು. ಬಂಟ್ವಾಳ ತಾಲೂಕಿನ ಬಿ.ಸಿ. ರೋಡ್ ಸಮೀಪದ ಪರ್ಲಿಯಾ ಎಂಬಲ್ಲಿ ರಹಸ್ಯವಾಗಿ ಬಾಡಿಗೆ ಮನೆಯೊಂದನ್ನು ಮಾಡಿಕೊಂಡು ವಾಸವಿದ್ದನು. ಈ ಬಗ್ಗೆ ನಿಖರ ಮಾಹಿತಿ ಕಲೆ ಹಾಕಿದ ಮೂಡಬಿದಿರೆ ಠಾಣಾ ಪೊಲೀಸರು, ಏಪ್ರಿಲ್ 18ರಂದು ಪರ್ಲಿಯಾದ ಅಡಗುದಾಣದ ಮೇಲೆ ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.
