ಮಂಗಳೂರು: ಯಾರೋ ಅಪರಿಚಿತ ವಂಚಕರು ಮೊಬೈಲ್ಗೆ ಲಿಂಕ್ ಇರುವ ಎಸ್ಎಂಎಸ್ ಕಳುಹಿಸಿ ಮೊಬೈಲ್ ಹ್ಯಾಕ್ ಮಾಡುವ ಮೂಲಕ ವ್ಯಕ್ತಿಯೊಬ್ಬರ ವಿವಿಧ ಬ್ಯಾಂಕ್ ಖಾತೆಗಳಿಂದ ಹಂತ ಹಂತವಾಗಿ ₹6,91,534 ಹಣವನ್ನು ಆನ್ಲೈನ್ ಮೂಲಕ ವರ್ಗಾಯಿಸಿಕೊಂಡು ವಂಚಿಸಿರುವ ಘಟನೆ ಕಾವೂರು ಮತ್ತು ಕುಳೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಸಂತ್ರಸ್ತರು ಯೂನಿಯನ್ ಬ್ಯಾಂಕ್ನ ಕಾವೂರು ಶಾಖೆಗೆ ತೆರಳಿ ಖಾತೆಯ ಸ್ಟೇಟ್ಮೆಂಟ್ ಪರಿಶೀಲಿಸಿದಾಗ, ಮೇ 3 ರಂದು ಯುಪಿಐ (UPI) ಮೂಲಕ ಅವರ ಖಾತೆಯಿಂದ ಪೇಮೆಂಟ್ಸ್ ಬ್ಯಾಂಕ್ನ ಖಾತೆಯೊಂದಕ್ಕೆ ಹಂತ ಹಂತವಾಗಿ ₹3,76,620 ವರ್ಗಾವಣೆಯಾಗಿತ್ತು. ಅಷ್ಟೇ ಅಲ್ಲದೆ, ಅವರ ಬ್ಯಾಂಕ್ ಆಫ್ ಬರೋಡಾ ಕುಳೂರು ಶಾಖೆಯ ಎರಡು ಖಾತೆಗಳಿಂದಲೂ ಅದೇ ದಿನ ಯುಪಿಐ ಮೂಲಕ ಪೇಮೆಂಟ್ಸ್ ಬ್ಯಾಂಕ್ ಹಾಗೂ ಯುಕೋ ಬ್ಯಾಂಕ್ ಖಾತೆಗಳಿಗೆ ₹3,14,914 ವರ್ಗಾವಣೆಯಾಗಿರುವುದು ಬೆಳಕಿಗೆ ಬಂದಿದೆ.
ಒಟ್ಟು ₹6,91,534.88 ಹಣವನ್ನು ವಂಚಕರು ಎಗರಿಸಿದ್ದಾರೆ. ಈ ಕುರಿತು ಸಂತ್ರಸ್ತರು ತಕ್ಷಣವೇ 1930 ಸೈಬರ್ ಕ್ರೈಮ್ ಹೆಲ್ಪ್ಲೈನ್ಗೆ ದೂರು ನೀಡಿದ್ದು, ಸದ್ಯ ಸೆನ್ (CEN) ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆ ಮುಂದುವರಿದಿದೆ.
