ಬ್ರಹ್ಮಾವರ : ರೌಡಿಶೀಟರ್ ಸುಜಿತ್ ಪಿಂಟೊ (43) ಭೀಕರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸತ್ಯಾಂಶ ಬೆಳಕಿಗೆ ಬಂದಿದ್ದು, ವೈಯಕ್ತಿಕ ಹಾಗೂ ಹಣಕಾಸಿನ ವಿಚಾರದ ಗಲಾಟೆಯಲ್ಲಿ ಸಹೋದರರಿಬ್ಬರು ಸೇರಿ ಸ್ಟೀಲ್ ಪೈಪ್‌ನಿಂದ ತಲೆಗೆ ಬಲವಾಗಿ ಹೊಡೆದು ಕೊಲೆ ಮಾಡಿರುವುದು ಪೊಲೀಸರ ತನಿಖೆಯಲ್ಲಿ ದೃಢಪಟ್ಟಿದೆ.

ಘಟನೆಗೆ ಸಂಬಂಧಿಸಿ ಬೈಕಾಡಿ ಗ್ರಾಮದ ಪಡುಬೈಕಾಡಿ ನಿವಾಸಿಗಳಾದ ಪ್ರದೀಪ್ ಪೂಜಾರಿ ಹಾಗೂ ಪ್ರಮೋದ್ ಪೂಜಾರಿ ಎಂಬ ಇಬ್ಬರು ಆರೋಪಿಗಳನ್ನು ಬ್ರಹ್ಮಾವರ ಪೊಲೀಸರು ತಕ್ಷಣವೇ ವಶಕ್ಕೆ ಪಡೆದಿದ್ದಾರೆ.
ಅಕ್ಟೋಬರ್ 27ರ ರಾತ್ರಿ 7:30 ರಿಂದ 8:30 ರ ಮಧ್ಯಾವಧಿಯಲ್ಲಿ ಬೈಕಾಡಿ ಗ್ರಾಮದ ಭದ್ರಗಿರಿ ಸರ್ಕಲ್ ಬಳಿ ಘಟನೆ ನಡೆದಿದೆ. ಆರೋಪಿಗಳಾದ ಪ್ರದೀಪ್ ಪೂಜಾರಿ ಹಾಗೂ ಪ್ರಮೋದ್ ಪೂಜಾರಿ ಅವರು ಬೈಕಾಡಿ ನಿವಾಸಿ ಜೀವನ್ ಪೂಜಾರಿ ಹಾಗೂ ಸಂತೆಕಟ್ಟೆ ನಿವಾಸಿ ಸುಜಿತ್ ಪಿಂಟೋನನ್ನು ಕರೆಸಿಕೊಂಡಿದ್ದರು. ಈ ವೇಳೆ ವೈಯಕ್ತಿಕ ವಿಚಾರವಾಗಿ ಮಾತಿಗೆ ಮಾತು ಬೆಳೆದು ಪರಸ್ಪರ ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿದೆ.
ಗಲಾಟೆ ವಿಕೋಪಕ್ಕೆ ಹೋದಾಗ ಪ್ರದೀಪ್ ಪೂಜಾರಿಯು ಸುಜಿತ್ ಪಿಂಟೋನನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದಾನೆ. ಇದೇ ವೇಳೆ ಪ್ರಮೋದ್ ಪೂಜಾರಿ ತನ್ನ ಪ್ಯಾಂಟ್‌ನ ಹಿಂಬದಿಯಲ್ಲಿ ಸಿಕ್ಕಿಸಿಕೊಂಡಿದ್ದ ಸ್ಟೀಲ್ ಪೈಪ್ ತಗೆದು ಸುಜಿತ್ ಪಿಂಟೊ ತಲೆಗೆ ಮತ್ತೆ ಮತ್ತೆ ಬಲವಾಗಿ ಹೊಡೆದು ಭೀಕರವಾಗಿ ಹಲ್ಲೆ ನಡೆಸಿದ್ದಾನೆ.
ಜಗಳ ತಪ್ಪಿಸಲು ಬಂದ ಜೀವನ್ ಪೂಜಾರಿ ಮೇಲೆಯೂ ಆರೋಪಿಗಳು ಹಲ್ಲೆ ನಡೆಸಿದ್ದಾರೆ. ತಲೆ ಹಾಗೂ ಮುಖಕ್ಕೆ ತೀವ್ರ ಸ್ವರೂಪದ ಗಂಭೀರ ರಕ್ತಗಾಯಗಳಾದ ಪರಿಣಾಮ ಸುಜಿತ್ ಪಿಂಟೊ ರಕ್ತದ ಮಡುವಿನಲ್ಲಿ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆಯ ಪ್ರತ್ಯಕ್ಷ ಸಾಕ್ಷಿಯಾದ ಭದ್ರಗಿರಿ ಬೈಕಾಡಿ ನಿವಾಸಿ ಜೀವನ್ ಪೂಜಾರಿ (31) ನೀಡಿದ ದೂರಿನ ಮೇರೆಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 202/2026, ಭಾರತೀಯ ನ್ಯಾಯ ಸಂಹಿತೆ (BNS 2023) ಕಲಂ 352, 351(1), 115(2), 118(1), 103 ಜೊತೆಗೆ 3(5) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಪೋಲಿಸರ ಪ್ರಾಥಮಿಕ ವಿಚಾರಣೆಯಂತೆ, ಬಂಧಿತ ಆರೋಪಿಗಳಾದ ಪ್ರದೀಪ್ ಪೂಜಾರಿ ಹಾಗೂ ಪ್ರಮೋದ್ ಪೂಜಾರಿ ಇಬ್ಬರಿಗೂ ಯಾವುದೇ ಕ್ರಿಮಿನಲ್ ಹಿನ್ನೆಲೆ ಇಲ್ಲ. ಹಣಕಾಸು ಹಾಗೂ ವೈಯಕ್ತಿಕ ದ್ವೇಷದ ಕಾರಣದಿಂದ ತತ್ಕ್ಷಣದ ಆಕ್ರೋಶದಲ್ಲಿ ಈ ಕೃತ್ಯ ಎಸಗಿದ್ದಾರೆ. ಆದರೆ ಕೊಲೆಯಾದ ಸುಜಿತ್ ಪಿಂಟೊ ಮಲ್ಪೆ ಪೊಲೀಸ್ ಠಾಣೆಯ ರೌಡಿಶೀಟರ್ ಆಗಿದ್ದು, ಈತನ ವಿರುದ್ಧ ಉಡುಪಿ ನಗರ, ಮಲ್ಪೆ, ಹಿರಿಯಡ್ಕ ಹಾಗೂ ಮಣಿಪಾಲ ಪೊಲೀಸ್ ಠಾಣೆಗಳಲ್ಲಿ ಹಲವು ಗಂಭೀರ ಅಪರಾಧ ಪ್ರಕರಣಗಳು ದಾಖಲಾಗಿದ್ದವು ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.















