ಉಡುಪಿ: ಪ್ರವಾಸಿಗರಿಗೆ ಗಾಂಜಾ ಮಾರಾಟ ಮಾಡುತ್ತಿದ್ದರೆಂಬ ಖಚಿತ ಮಾಹಿತಿಯ ಮೇರೆಗೆ ಪೊಲೀಸರು ಕಾಪು ತಾಲೂಕಿನ ಉಳಿಯಾರಗೋಳಿ ಗ್ರಾಮದ ಯಾರ್ಡ್ ಬೀಚ್ನಲ್ಲಿ ದಾಳಿ ನಡೆಸಿ 5.710 ಕೆ.ಜಿ. ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ. ಇದರ ಮೌಲ್ಯ ₹2.85 ಲಕ್ಷ ಎಂದು ಅಂದಾಜಿಸಲಾಗಿದ್ದು, ಇಬ್ಬರನ್ನು ಬಂಧಿಸಲಾಗಿದೆ.
ಬಂಧಿತರನ್ನು ಬೆಳಪು ಗ್ರಾಮದ ವಿನಯನಗರ, ಬದ್ರಿಯಾ ಮಸೀದಿ ಬಳಿಯ ನಿವಾಸಿ ಆರೀಫ್ (38) ಹಾಗೂ ಉಡುಪಿ ತಾಲೂಕಿನ ಪಡುತೋನ್ಸೆ ಗ್ರಾಮದ ಹೂಡೆ, ಕೆಮ್ಮಣ್ಣು ಜಾಮೀಯ ಮಸೀದಿ ಬಳಿಯ ನಿವಾಸಿ ಅಕೀಫ್ (34) ಎಂದು ಗುರುತಿಸಲಾಗಿದೆ. ಆರೋಪಿಗಳಿಂದ ಗಾಂಜಾ, ₹225 ನಗದು ಹಾಗೂ ಎರಡು ಮೊಬೈಲ್ ಫೋನ್ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಅಕ್ಟೋಬರ್ 27ರಂದು ಬೆಳಿಗ್ಗೆ 11 ಗಂಟೆಗೆ ಕಾಪು ಪೊಲೀಸ್ ವೃತ್ತ ನಿರೀಕ್ಷಕ ಅಜ್ಮತ್ ಆಲಿ ಅವರಿಗೆ ಖಚಿತ ಮಾಹಿತಿ ಲಭಿಸಿತ್ತು. ಕಾಪು ಮತ್ತು ಮಟ್ಟು ಬೀಚ್ಗಳಿಗೆ ಬರುವ ಪ್ರವಾಸಿಗರಿಗೆ ಇಬ್ಬರು ವ್ಯಕ್ತಿಗಳು ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದಾರೆ ಎಂಬ ಮಾಹಿತಿ ಆಧರಿಸಿ, ಉಳಿಯಾರಗೋಳಿ ಯಾರ್ಡ್ ಬೀಚ್ನಲ್ಲಿ ದಾಳಿ ನಡೆಸಲು ಕಾಪು ಪೊಲೀಸ್ ಠಾಣೆಯ ಪಿಎಸ್ಐ ತೇಜಸ್ವಿ ಅವರಿಗೆ ಸೂಚಿಸಲಾಗಿತ್ತು.
ಅದರಂತೆ ಮಧ್ಯಾಹ್ನ 12.05ಕ್ಕೆ ಪೊಲೀಸರು ದಾಳಿ ನಡೆಸಿದಾಗ, ಆರೋಪಿಗಳು ಸ್ವಂತ ಲಾಭಕ್ಕಾಗಿ ಮಾರಾಟ ಮಾಡುವ ಉದ್ದೇಶದಿಂದ ಗಾಂಜಾವನ್ನು ಹೊಂದಿರುವುದು ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳು ಆಂಧ್ರಪ್ರದೇಶದ ಹೈದರಾಬಾದ್ನಿಂದ ಗಾಂಜಾ ತಂದು ಮಾರಾಟ ಮಾಡುತ್ತಿದ್ದುದಾಗಿ ವಿಚಾರಣೆ ವೇಳೆ ತಿಳಿಸಿರುವುದಾಗಿ ಪೊಲೀಸರು ಹೇಳಿದ್ದಾರೆ. ಆರೋಪಿಗಳ ವಿರುದ್ಧ ವಿವಿಧ ಪೊಲೀಸ್ ಠಾಣೆಗಳಲ್ಲಿ ಈ ಹಿಂದೆಯೂ ಕ್ರಿಮಿನಲ್ ಪ್ರಕರಣಗಳಿವೆ ಎಂದು ಮಾಹಿತಿ ನೀಡಿದ್ದಾರೆ.
ಈ ಸಂಬಂಧ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಕಾರ್ಕಳ ಉಪವಿಭಾಗದ ಎಎಸ್ಪಿ ಈಶಿತಾ ಗುಪ್ತಾ ಹಾಗೂ ಕಾಪು ವೃತ್ತ ನಿರೀಕ್ಷಕ ಅಜ್ಮತ್ ಆಲಿ ಅವರ ಮಾರ್ಗದರ್ಶನದಲ್ಲಿ, ಪಿಎಸ್ಐ ತೇಜಸ್ವಿ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿತು. ಕಾಪು ಠಾಣೆಯ ಪೊಲೀಸ್ ಸಿಬ್ಬಂದಿ ಹಾಗೂ ಕಾರ್ಕಳ ಉಪವಿಭಾಗದ ಆಂಟಿ ಎನ್ಡಿಪಿಎಸ್ ಸ್ಕ್ವಾಡ್ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ಸಿಡಿಆರ್ ತಾಂತ್ರಿಕ ವಿಭಾಗದ ಸಿಬ್ಬಂದಿ ಮತ್ತು ಸೊಕೊ ಅಧಿಕಾರಿಗಳು ತನಿಖೆಗೆ ಸಹಕರಿಸಿದರು.















