ಬೆಂಗಳೂರು : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಾಫಿ ಸಾಕ್ಷಿ ಪ್ರದೋಷ್ ವಿಚಾರಣೆ ಆರಂಭವಾಗಿದ್ದು ಬೆಂಗಳೂರಿನ 59ನೇ ಸಿಸಿಎಚ್ ಕೋರ್ಟ್ ನಲ್ಲಿ ವಿಚಾರಣೆ ಆರಂಭವಾಗಿದೆ. ವಿಡಿಯೋ ಕಾನ್ಫರೆನ್ಸ್ ಮೂಲಕ ದರ್ಶನ್ ಮತ್ತು ಪವಿತ್ರ ಗೌಡ ಹಾಜರು ಆಗಿದ್ದಾರೆ. ಅದೇ ರೀತಿಯಾಗಿ ಇತರೆ ಆರೋಪಿಗಳಾದ ನಾಗರಾಜ, ಲಕ್ಷ್ಮಣ, ಅನುಕುಮಾರ್, ಜಗದೀಶ್ ಹಾಜರಾಗಿದ್ದಾರೆ. ಪ್ರದೋಷ್ ವಕೀಲರ ಚರ್ಚೆಗೆ ದರ್ಶನ್ ವಕೀಲರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಪ್ರದೋಷ್ ಈಗ ಆರೋಪಿಯಾಗಿಲ್ಲ ಸಾಕ್ಷಿಯಾಗಿದ್ದಾರೆ. ಹೀಗಾಗಿ ವಕೀಲರನ್ನು ನೇಮಿಸುವಂತಿಲ್ಲ ಎಂದು ದರ್ಶನ್ ಪರ ಹಿರಿಯ ವಕೀಲ ಹಶ್ಮತ್ ಪಾಷಾ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಇದೆ ಸಂದರ್ಭದಲ್ಲಿ ನ್ಯಾಯಾಲಯದ ವಿಚಾರಣೆಯನ್ನು ಸ್ಕ್ರೀನ್ ರೆಕಾರ್ಡ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡುತ್ತಿರುವುದಕ್ಕೆ ಆರೋಪಿಗಳ ಪರ ವಕೀಲರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ, ನಗರದ ಸಿಸಿಎಚ್-59 (ವಿಶೇಷ ನ್ಯಾಯಾಲಯ) ನ್ಯಾಯಾಲಯವು ಪ್ರಮುಖ ಆದೇಶವೊಂದನ್ನು ಹೊರಡಿಸಿದೆ. ಕೋರ್ಟ್ ಕಲಾಪಗಳ ವಿಡಿಯೋ ಅಥವಾ ಸ್ಕ್ರೀನ್ ರೆಕಾರ್ಡಿಂಗ್ ಮಾಡಿ ಸಾಮಾಜಿಕ ಜಾಲತಾಣಗಳು ಸೇರಿದಂತೆ ಯಾವುದೇ ವೇದಿಕೆಗಳಲ್ಲಿ ಹಂಚಿಕೊಳ್ಳುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.
ಈ ವಿಚಾರಣೆಯು ‘ಇನ್ ಕ್ಯಾಮರಾ ಪ್ರೊಸೀಡಿಂಗ್ಸ್’ (ಗೌಪ್ಯ ವಿಚಾರಣೆ) ಆಗಿರುವುದರಿಂದ, ಇದರ ರೆಕಾರ್ಡಿಂಗ್ ಹಾಗೂ ಪ್ರಸಾರವನ್ನು ನ್ಯಾಯಾಲಯವು ಗಂಭೀರವಾಗಿ ಪರಿಗಣಿಸಿದೆ. ಕೋರ್ಟ್ ಕಲಾಪದ ಗೌಪ್ಯತೆ ಮತ್ತು ಭದ್ರತೆಯನ್ನು ಕಾಯ್ದುಕೊಳ್ಳುವ ಹಿತದೃಷ್ಟಿಯಿಂದ ಈ ರೀತಿಯ ಕಾನೂನುಬಾಹಿರ ಕೃತ್ಯಗಳಲ್ಲಿ ತೊಡಗುವವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.















