ಮಂಗಳೂರು: ಪಾಂಡೇಶ್ವರದ ಅಮೃತ್ ನಗರ ವಸತಿ ಪ್ರದೇಶದಲ್ಲಿ ಕುಡಿಯುವ ನೀರಿನ ಸಮಸ್ಯೆ ದಿನದಿಂದ ದಿನಕ್ಕೆ ಗಂಭೀರವಾಗುತ್ತಿದ್ದು, ಇಲ್ಲಿನ ನಿವಾಸಿಗಳಿಗೆ ಸಮರ್ಪಕ ಹಾಗೂ ನಿರಂತರ ಕುಡಿಯುವ ನೀರು ಒದಗಿಸಲು ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಸಾಮಾಜಿಕ ಕಾರ್ಯಕರ್ತ ಶರೀಫ್ ಪಾಂಡೇಶ್ವರ್ ಆಗ್ರಹಿಸಿದ್ದಾರೆ.
ಅಮೃತ್ ನಗರದಲ್ಲಿ ಕುಡಿಯುವ ನೀರಿನ ಕೊರತೆಯಿಂದ ನಿವಾಸಿಗಳು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಆದರೆ ಮತ್ತೊಂದೆಡೆ ಪಾಲಿಕೆಯ ನೀರು ವಾಣಿಜ್ಯ ಉದ್ದೇಶಗಳಿಗೆ ಹಾಗೂ ಅನಧಿಕೃತ ಪಿ.ಜಿ.ಗಳಿಗೆ ಬಳಕೆಯಾಗುತ್ತಿದೆ ಎಂಬ ದೂರುಗಳು ಕೇಳಿಬರುತ್ತಿವೆ. ಈ ಕುರಿತು ಪಾಲಿಕೆ ಅಧಿಕಾರಿಗಳು ತಕ್ಷಣ ಪರಿಶೀಲನೆ ನಡೆಸಿ, ಅಕ್ರಮ ಸಂಪರ್ಕಗಳು ಅಥವಾ ನೀರಿನ ದುರ್ಬಳಕೆ ಕಂಡುಬಂದಲ್ಲಿ ಕಾನೂನುಬದ್ಧವಾಗಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.
“ಕುಡಿಯುವ ನೀರು ಪ್ರತಿಯೊಬ್ಬ ನಾಗರಿಕನ ಮೂಲಭೂತ ಅಗತ್ಯ. ವಸತಿ ಪ್ರದೇಶದ ಜನರು ನೀರಿಗಾಗಿ ಪರದಾಡುತ್ತಿರುವ ಸಂದರ್ಭದಲ್ಲಿ ನೀರಿನ ದುರ್ಬಳಕೆಗೆ ಅವಕಾಶ ನೀಡಬಾರದು. ಅಮೃತ್ ನಗರದ ನೀರಿನ ಸಮಸ್ಯೆಗೆ ತಾತ್ಕಾಲಿಕ ಕ್ರಮಗಳ ಬದಲಾಗಿ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು,” ಎಂದು ಶರೀಫ್ ಪಾಂಡೇಶ್ವರ್ ತಿಳಿಸಿದ್ದಾರೆ.
ಅಮೃತ್ ನಗರ ಪ್ರದೇಶಕ್ಕೆ ನಿಯಮಿತವಾಗಿ ನೀರು ಪೂರೈಕೆ ಮಾಡುವ ವ್ಯವಸ್ಥೆ, ನೀರಿನ ಒತ್ತಡ ಹಾಗೂ ಪೈಪ್‌ಲೈನ್‌ಗಳ ಪರಿಶೀಲನೆ, ಅನಧಿಕೃತ ಸಂಪರ್ಕಗಳ ಪತ್ತೆ ಮತ್ತು ವಾಣಿಜ್ಯ ಬಳಕೆಯ ಮೇಲ್ವಿಚಾರಣೆ ನಡೆಸುವಂತೆ ಅವರು ಪಾಲಿಕೆ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.
ಅಮೃತ್ ನಗರದ ನಿವಾಸಿಗಳ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಯಾವಾಗ? ಎಂಬುದಕ್ಕೆ ಪಾಲಿಕೆ ಅಧಿಕಾರಿಗಳು ಸ್ಪಷ್ಟ ಉತ್ತರ ನೀಡಬೇಕು ಎಂದು ಅವರು ಆಗ್ರಹಿಸಿದ್ದಾರೆ.















