ಹೆಣ್ಣು ಮಗು ಹುಟ್ಟಿತೆಂಬ ಒಂದೇ ಕಾರಣಕ್ಕೆ ಸ್ವಂತ ತಂದೆಯೇ ತನ್ನ 13 ದಿನದ ಕಂದಮ್ಮನನ್ನು ನೀರಿನ ಸಂಪ್‌ಗೆ ಎಸೆದು ಕ್ರೂರವಾಗಿ ಹತ್ಯೆ ಮಾಡಿರುವ ಅಮಾನವೀಯ ಘಟನೆ ಚಿಕ್ಕಬಳ್ಳಾಪುರ ನಗರದ ಶಾಂತಿನಗರದಲ್ಲಿ ನಡೆದಿದೆ.
ಹುಡುಕಾಡುವ ನಾಟಕವಾಡಿದ್ದ ಆರೋಪಿ
ಸ್ಥಳೀಯ ನಿವಾಸಿಗಳಾದ ಇಮ್ರಾನ್ ಹಾಗೂ ಮುಸ್ಕಾನ್ ದಂಪತಿಗೆ ಕೇವಲ 13 ದಿನಗಳ ಹಿಂದೆಯಷ್ಟೇ ಹೆಣ್ಣು ಮಗು ಜನಿಸಿತ್ತು. ಆದರೆ ಹೆಣ್ಣು ಮಗು ಹುಟ್ಟಿದ್ದಕ್ಕೆ ಅಸಮಾಧಾನಗೊಂಡಿದ್ದ ತಂದೆ ಇಮ್ರಾನ್, ಬುಧವಾರ (ಜುಲೈ 22) ತಡರಾತ್ರಿ ಕುಟುಂಬಸ್ಥರೆಲ್ಲರೂ ನಿದ್ರಿಸುತ್ತಿದ್ದ ವೇಳೆ ರಾಕ್ಷಸ ಕೃತ್ಯ ಎಸಗಿದ್ದಾನೆ. ಮಲಗಿದ್ದ ಮಗುವನ್ನು ಗುಟ್ಟಾಗಿ ಎತ್ತಿಕೊಂಡು ಹೋಗಿ ಮನೆಯಲ್ಲಿದ್ದ ನೀರಿನ ಸಂಪ್‌ಗೆ ಎಸೆದಿದ್ದಾನೆ.
ಬೆಳಕಿಗೆ ಬಂದ ಕೃತ್ಯ
ತಡರಾತ್ರಿ ಎಚ್ಚರಗೊಂಡ ತಾಯಿ ಮುಸ್ಕಾನ್ ಮಗು ಕಾಣದೇ ಗಾಬರಿಯಿಂದ ಪತಿಯಲ್ಲಿ ವಿಚಾರಿಸಿದಾಗ, ತನಗೆ ಏನೂ ತಿಳಿದಿಲ್ಲವೆಂದು ಇಮ್ರಾನ್ ನಟಿಸಿದ್ದಾನೆ. ಅಲ್ಲದೆ, ಮಗು ಎಲ್ಲೋ ಕಾಣೆಯಾಗಿದೆ ಎಂದು ಕುಟುಂಬದವರೊಂದಿಗೆ ಸೇರಿ ಹುಡುಕುವ ನಾಟಕವಾಡಿದ್ದಾನೆ. ಆದರೆ ಅನುಮಾನಗೊಂಡು ಪರಿಶೀಲಿಸಿದಾಗ ಮಗು ನೀರಿನ ಸಂಪ್‌ನಲ್ಲಿ ಹೆಣವಾಗಿ ಪತ್ತೆಯಾಗಿದೆ.
ಸ್ವಂತ ಮಗಳನ್ನೇ ಬಲಿ ಪಡೆದ ಈ ಕ್ರೂರಿ ತಂದೆಯ ಕೃತ್ಯಕ್ಕೆ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.















