ನವದೆಹಲಿ: ನೀಟ್-ಯುಜಿ (NEET-UG) ಪರೀಕ್ಷಾ ಅಕ್ರಮ ಹಾಗೂ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿಯ ಜಂತರ್ ಮಂತರ್‌ನಲ್ಲಿ ವಿದ್ಯಾರ್ಥಿಗಳು ನಡೆಸುತ್ತಿದ್ದ ಬೃಹತ್ ಪ್ರತಿಭಟನೆಗೆ ಕೊನೆಗೂ ಮಣಿದಿರುವ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್, ಶನಿವಾರ ತಮ್ಮ ಹುದ್ದೆಗೆ ರಾಜೀನಾಮೆ ನೀಡುವುದಾಗಿ ಅಧಿಕೃತವಾಗಿ ಘೋಷಿಸಿದ್ದಾರೆ.
ತಮ್ಮ ಪತ್ರದಲ್ಲಿ ಯುವ ಸಾಥಿಗಳನ್ನು ಉದ್ದೇಶಿಸಿ ಬರೆದಿರುವ ಅವರು, ಕಳೆದ 4 ದಶಕಗಳಿಂದಲೂ (40 ವರ್ಷಗಳು) ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಸುಧಾರಣೆ ತರಲು ತಮ್ಮನ್ನು ತಾವು ಸಮರ್ಪಿಸಿಕೊಂಡಿರುವುದಾಗಿ ತಿಳಿಸಿದ್ದಾರೆ. ಬಲವಾದ, ಅಂತರ್ಗತ ಹಾಗೂ ದೂರದೃಷ್ಟಿಯ ಶಿಕ್ಷಣ ವ್ಯವಸ್ಥೆಯೇ ಸಶಕ್ತ ರಾಷ್ಟ್ರದ ಅಡಿಪಾಯ ಎಂಬುದು ತಮ್ಮ ನಂಬಿಕೆಯಾಗಿದೆ. ದೇಶದ ಯುವಜನರ ಆಶೋತ್ತರಗಳು, ಭಾವನೆಗಳು ಮತ್ತು ನ್ಯಾಯಯುತ ನಿರೀಕ್ಷೆಗಳಿಗೆ ತಾವು ಸದಾ ಗೌರವ ನೀಡಿದ್ದು, ಭಾರತದ ಯುವ ಪೀಳಿಗೆಯ ಕನಸುಗಳನ್ನು ನನಸು ಮಾಡುವುದೇ ತಮ್ಮ ರಾಜಕೀಯ ಹಾಗೂ ಸಾಮಾಜಿಕ ಜೀವನದ ಪ್ರಮುಖ ನೈತಿಕ ಸಂಕಲ್ಪವಾಗಿದೆ ಎಂದು ಹೇಳಿದ್ದಾರೆ.
