ಸಾಮಾಜಿಕ ಜಾಲತಾಣಗಳಲ್ಲಿ ಅಜ್ಞಾತ ವ್ಯಕ್ತಿಗಳೊಂದಿಗೆ ಮುಖಾಮುಖಿಯಾಗದೆ ಬೆಳೆಸುವ ಆನ್‌ಲೈನ್ ಸ್ನೇಹ ಹಾಗೂ ದುಬಾರಿ ಉಡುಗೊರೆಗಳ ಆಸೆ ಎಷ್ಟು ಅಪಾಯಕಾರಿ ಎಂಬುದಕ್ಕೆ ರಾಜಧಾನಿ ಬೆಂಗಳೂರಿನಲ್ಲಿ ಮತ್ತೊಂದು ದಿಗಿಲು ಹುಟ್ಟಿಸುವ ಘಟನೆ ಬೆಳಕಿಗೆ ಬಂದಿದೆ. ಯಶವಂತಪುರದ ನಿವಾಸಿಯಾಗಿರುವ ಮಹಿಳೆಯೊಬ್ಬರು ದುಬಾರಿ ಸೀರೆ ಹಾಗೂ ವಜ್ರಾಭರಣಗಳ ಗಿಫ್ಟ್‌ನ ಮೋಹಕ್ಕೆ ಬಿದ್ದು, ಸೈಬರ್ ವಂಚಕರ ಜಾಲದಲ್ಲಿ ಸಿಲುಕಿ ಬರೋಬ್ಬರಿ 1.75 ಕೋಟಿ ರೂಪಾಯಿ ಕಳೆದುಕೊಂಡಿದ್ದಾರೆ. ಈ ಬೃಹತ್ ಆನ್‌ಲೈನ್ ವಂಚನೆಗೆ ಸಂಬಂಧಿಸಿದಂತೆ ಉತ್ತರ ವಿಭಾಗದ ಸೈಬರ್ ಕ್ರೈಂ (CEN) ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ, ‘ಸಾಹಿಲ್ ಜುಗ್ಗಲ್’ ಎಂಬ ಹೆಸರಿನ ವ್ಯಕ್ತಿ ಫೇಸ್‌ಬುಕ್ ಮೂಲಕ ಈ ಮಹಿಳೆಗೆ ಪರಿಚಯವಾಗಿದ್ದ. ಆರಂಭದಲ್ಲಿ ಸಾಮಾನ್ಯ ಸೌಹಾರ್ದಯುತ ಸಂಭಾಷಣೆಯೊಂದಿಗೆ ಬೆಳೆದ ಈ ಪರಿಚಯ, ಕ್ರಮೇಣ ಇಬ್ಬರ ನಡುವೆ ಮೊಬೈಲ್ ಸಂಖ್ಯೆಗಳ ವಿನಿಮಯಕ್ಕೆ ದಾರಿ ಮಾಡಿಕೊಟ್ಟಿತ್ತು. ತಾನು ಯುನೈಟೆಡ್ ಕಿಂಗ್‌ಡಮ್ (UK) ನಲ್ಲಿ ಕೆಲಸ ಮಾಡುತ್ತಿರುವುದಾಗಿ ನಂಬಿಸಿದ್ದ ಸಾಹಿಲ್, ಮಹಿಳೆಯ ವಿಶ್ವಾಸ ಗಳಿಸಿದ ಬಳಿಕ ಆಕೆಗೆ ವಿದೇಶದಿಂದ ಅತ್ಯಂತ ದುಬಾರಿ ಬೆಲೆಯ ಸೀರೆಗಳು, ಅಪರೂಪದ ರತ್ನಗಳು ಹಾಗೂ ಬೆಲೆಬಾಳುವ ವಜ್ರಾಭರಣಗಳನ್ನು ವಿಶೇಷ ಗಿಫ್ಟ್ ಆಗಿ ಕಳುಹಿಸುತ್ತಿರುವುದಾಗಿ ಹೇಳಿ ನಂಬಿಸಿದ್ದ.
ಕೆಲ ದಿನಗಳ ನಂತರ ಮಹಿಳೆಗೆ ಕರೆ ಮಾಡಿದ ಆರೋಪಿ, ಯುಕೆ ಸಾಲದಲ್ಲಿದ್ದು ತನ್ನ ಬಳಿ ಸದ್ಯಕ್ಕೆ ಭಾರತೀಯ ಕರೆನ್ಸಿ ಇಲ್ಲದಿರುವುದಾಗಿ ನಾಟಕವಾಡಿದ್ದಾನೆ. ಕಸ್ಟಮ್ಸ್ ಶುಲ್ಕ (Customs Clearance) ಪಾವತಿಸಲು ತಾತ್ಕಾಲಿಕವಾಗಿ 40 ಲಕ್ಷ ರೂಪಾಯಿ ನೀಡುವಂತೆ ಮನವೊಲಿಸಿದ್ದಾನೆ. ಹಣ ವರ್ಗಾವಣೆಗೆ ವಿಚಿತ್ರ ಶೈಲಿ ಬಳಸಿದ ಆತ, ಅರ್ಧಕ್ಕೆ ಹರಿದಿದ್ದ 10 ರೂಪಾಯಿ ಮುಖಬೆಲೆಯ ನೋಟಿನ ಫೋಟೋವನ್ನು ಮೊಬೈಲ್‌ಗೆ ಕಳುಹಿಸಿದ್ದ. ತಾನು ಸೂಚಿಸಿದ ಹೋಟೆಲ್‌ಗೆ ತೆರಳಿ, ಅಲ್ಲಿ ಅದೇ ರೀತಿ ಅರ್ಧ ಹರಿದ 10 ರೂಪಾಯಿ ನೋಟು ತೋರಿಸುವ ವ್ಯಕ್ತಿಗೆ ಹಣ ನೀಡುವಂತೆ ತಿಳಿಸಿದ್ದ. ವಂಚಕನ ಮಾತು ಸಂಪೂರ್ಣವಾಗಿ ನಂಬಿದ ಮಹಿಳೆ, ನಿಗದಿತ ಹೋಟೆಲ್‌ಗೆ ತೆರಳಿ ಆ ವ್ಯಕ್ತಿಗೆ 40 ಲಕ್ಷ ರೂ. ತಲುಪಿಸಿದ್ದಾರೆ.
ಈ ಮೊದಲ ಹಂತದ ಹಣ ಹಸ್ತಾಂತರದ ಬೆನ್ನಲ್ಲೇ, ಸೈಬರ್ ಗ್ಯಾಂಗ್‌ನ ಮತ್ತೊಬ್ಬ ಖದೀಮ ರಂಗಪ್ರವೇಶ ಮಾಡಿದ್ದಾನೆ. ತಾನು ಕಸ್ಟಮ್ಸ್ ಅಧಿಕಾರಿ ಎಂದು ಪರಿಚಯಿಸಿಕೊಂಡು ಕರೆ ಮಾಡಿದ ಆ ವ್ಯಕ್ತಿ, ವಿದೇಶದಿಂದ ಬಂದಿರುವ ಗಿಫ್ಟ್ ಪಾರ್ಸೆಲ್‌ನಲ್ಲಿ ಅತ್ಯಂತ ದುಬಾರಿ ವಜ್ರಾಭರಣಗಳಿರುವುದರಿಂದ ಅದಕ್ಕೆ ಹೆಚ್ಚಿನ ಪ್ರಮಾಣದ ತೆರಿಗೆ ಹಾಗೂ ನಾನಾ ರೀತಿಯ ಕಾನೂನು ಶುಲ್ಕಗಳನ್ನು ಪಾವತಿಸಬೇಕಾಗುತ್ತದೆ ಎಂದು ಹೆದರಿಸಿದ್ದಾನೆ. ಈ ನೆಪದಲ್ಲಿ ಹಂತ ಹಂತವಾಗಿ ಮಹಿಳೆಯಿಂದ ಹಣ ಪೀಕಲಾರಂಭಿಸಿದ ಖದೀಮರು, ಕೊನೆಗೆ ಒಟ್ಟಾರೆಯಾಗಿ ಒಂದು ಮುಕ್ಕಾಲು ಕೋಟಿ ರೂಪಾಯಿ (1.75 ಕೋಟಿ ರೂ.) ಹಣವನ್ನು ಜೇಬಿಗಿಳಿಸಿಕೊಂಡು ವಂಚಿಸಿದ್ದಾರೆ.
ಬಹಳ ದಿನಗಳು ಕಳೆದರೂ ತನಗೆ ತಲುಪಬೇಕಿದ್ದ ಕೋಟ್ಯಂತರ ರೂಪಾಯಿ ಮೌಲ್ಯದ ವಿದೇಶಿ ಗಿಫ್ಟ್ ಕೈಸೇರದೆ ಇದ್ದಾಗ ಅನುಮಾನಗೊಂಡ ಮಹಿಳೆ, ಘಟನೆಯ ಸಂಪೂರ್ಣ ಹಿನ್ನೆಲೆಯನ್ನು ಪರಿಶೀಲಿಸಿದಾಗ ತಾನು ಸೈಬರ್ ಕಳ್ಳರ ಜಾಲಕ್ಕೆ ಬಿದ್ದು ಸಂಪೂರ್ಣವಾಗಿ ಮೋಸ ಹೋಗಿರುವುದು ಅರಿವಿಗೆ ಬಂದಿದೆ. ತಕ್ಷಣವೇ ಜಾಗೃತರಾದ ಅವರು ಉತ್ತರ ವಿಭಾಗದ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ವಂಚಕರ ಮೊಬೈಲ್ ಸಂಖ್ಯೆ, ಬ್ಯಾಂಕ್ ಖಾತೆಗಳು ಹಾಗೂ ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಜಾಲ ಬೀಸಿ ತನಿಖೆ ಮುಂದುವರಿಸಿದ್ದಾರೆ.
