ಇನ್ನೇನು ಕೆಲವು ಗಂಟೆಗಳಲ್ಲಿ ತನ್ನ ಮನೆಗೆ, ಹೆತ್ತವರ, ಹೆಂಡತಿ ಮಕ್ಕಳ ಬಳಿಗೆ ತಲುಪುತ್ತೇನೆ ಎಂದು ಕನಸು ಕಾಣುತ್ತಿದ್ದ ಕಣ್ಣೂರಿನ ಮಾಹಿ ಪೆರಿಂಗಾಡಿ ಮೂಲದ 40 ವರ್ಷದ ಅಬೂಟ್ಟಿ ವೆಳ್ಳಿಳಿ ಎಂಬ ಮಲಯಾಳಿ ಯುವಕನಿಗೆ ಸೌದಿ ಅರೇಬಿಯಾದ ದಮ್ಮಾಮ್ ಜೈಲಿನಲ್ಲಿ ಮರಣದಂಡನೆ ಜಾರಿಯಾಗಿದೆ. ಅವರು ಮಾಡಿದ ತಪ್ಪಾದರೂ ಏನು?
ರಿಯಾದ್/ಕಣ್ಣೂರು: ಸೌದಿ ಅರೇಬಿಯಾದ ದಮ್ಮಾಮ್‌ನಲ್ಲಿ ಕೇರಳದ ಕಣ್ಣೂರು ಮೂಲದ ಅಬೂಟಿ ವಲ್ಲಿಯಿಲ್ (41) ಎಂಬವರು ಮರಣದಂಡನೆ ಶಿಕ್ಷೆಗೆ ಗುರಿಯಾಗಿರುವುದು ಭಾರತೀಯ ವಲಸಿಗ ಸಮುದಾಯದಲ್ಲಿ ತೀವ್ರ ಆಘಾತವನ್ನುಂಟು ಮಾಡಿದೆ. ಅಂತರರಾಷ್ಟ್ರೀಯ ಮಾದಕವಸ್ತು ಸಿಂಡಿಕೇಟ್‌ಗಳ ಜಾಲಕ್ಕೆ ಮುಗ್ಧ ವಲಸಿಗರು ಹೇಗೆ ಬಲಿಯಾಗುತ್ತಿದ್ದಾರೆ ಎಂಬುದಕ್ಕೆ ಈ ದುರಂತ ಘಟನೆ ಕಠೋರ ಎಚ್ಚರಿಕೆಯಾಗಿದೆ.
ಅಬೂಟಿ ಡಿಸೆಂಬರ್ 2, 2023 ರಂದು ಸೌದಿಯಿಂದ ಭಾರತಕ್ಕೆ ಮರಳಬೇಕಿತ್ತು. ರಾತ್ರಿ 11.45 ಕ್ಕೆ ರಿಯಾದ್‌ನಿಂದ ಏರ್ ಇಂಡಿಯಾ ವಿಮಾನ ಹತ್ತಿ, ಮರುದಿನ ಬೆಳಿಗ್ಗೆ 7 ಗಂಟೆಗೆ ಕೇರಳದ ಕರಿಪುರ ವಿಮಾನ ನಿಲ್ದಾಣಕ್ಕೆ ತಲುಪುವುದಾಗಿ ಕುಟುಂಬಸ್ಥರಿಗೆ ಸಂದೇಶ ಕಳುಹಿಸಿದ್ದರು. ಆದರೆ, ವಿಮಾನ ನಿಲ್ದಾಣದಲ್ಲಿ ಕಾಯುತ್ತಿದ್ದ ಕುಟುಂಬಸ್ಥರಿಗೆ ಅಬೂಟಿ ಕಾಣ ಸಿಗಲಿಲ್ಲ. ಕುಟುಂಬದ ಆತಂಕದ ಮೇರೆಗೆ ರಿಯಾದ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಮತ್ತು ಸ್ಥಳೀಯ ಸಾಮಾಜಿಕ ಕಾರ್ಯಕರ್ತರು ರಿಯಾದ್‌ನ ಆಸ್ಪತ್ರೆಗಳು ಹಾಗೂ ಪೊಲೀಸ್ ಠಾಣೆಗಳಲ್ಲಿ ವ್ಯಾಪಕ ಹುಡುಕಾಟ ನಡೆಸಿದರು. ಏರ್ ಇಂಡಿಯಾ ಮತ್ತು ವಲಸೆ ಇಲಾಖೆಯನ್ನು ಪರಿಶೀಲಿಸಿದಾಗ ಅಬೂಟಿ ವಿಮಾನವನ್ನೇ ಹತ್ತಿರಲಿಲ್ಲ ಎಂಬುದು ತಿಳಿದುಬಂತು.
ರಾಯಭಾರ ಕಚೇರಿಯ ಪ್ರತಿನಿಧಿಗಳು ಅಲ್-ಅಹ್ಸಾ ಜೈಲಿಗೆ ಭೇಟಿ ನೀಡಿದಾಗ ಪ್ರಕರಣಕ್ಕೆ ದೊಡ್ಡ ತಿರುವು ಸಿಕ್ಕಿತು. ಅಲ್ಲಿ ಬಂಧಿತರಾಗಿದ್ದ 202 ಭಾರತೀಯ ಕೈದಿಗಳ ಪರಿಶೀಲನೆ ವೇಳೆ, ಮೂಲೆಯೊಂದರಲ್ಲಿ ತೀವ್ರ ನಿರಾಶೆಯಿಂದ ಕುಳಿತಿದ್ದ ಅಬೂಟಿ ಪತ್ತೆಯಾದರು. ಅಬೂಟಿ ನೀಡಿದ ಮಾಹಿತಿಯಂತೆ, ಸ್ನೇಹಿತನೊಬ್ಬ ಓಮನ್‌ನಿಂದ ಸೌದಿ ಅರೇಬಿಯಾಕ್ಕೆ ಲ್ಯಾಂಡ್ ಕ್ರೂಸರ್ ವಾಹನವನ್ನು ಚಲಾಯಿಸಿಕೊಂಡು ಹೋಗುವಂತೆ ಕೇಳಿಕೊಂಡಿದ್ದನು. ಕಾರನ್ನು ಸೌದಿಯಲ್ಲಿರುವ ಸ್ನೇಹಿತನಿಗೆ ತಲುಪಿಸಿ, ಅಲ್ಲಿಂದ ನೇರವಾಗಿ ರಿಯಾದ್ ವಿಮಾನ ನಿಲ್ದಾಣದ ಮೂಲಕ ಮನೆಗೆ ಮರಳುವುದು ಅವರ ಯೋಜನೆಯಾಗಿತ್ತು. ಆದರೆ, ಉಮ್ ರಾಮೂಲ್‌ನ ಒಮಾನ್-ಸೌದಿ ಗಡಿ ಪ್ರದೇಶದಲ್ಲಿ ಸೌದಿ ಮಾದಕವಸ್ತು ಜಾರಿ ಅಧಿಕಾರಿಗಳು ವಾಹನವನ್ನು ತಡೆದು ತಪಾಸಣೆ ನಡೆಸಿದಾಗ, ವಾಹನದ ಎರಡು ಇಂಧನ ಟ್ಯಾಂಕ್‌ಗಳಲ್ಲಿ ಒಂದರಲ್ಲಿ 43 ಕಿಲೋಗ್ರಾಂ ಮೆಥಾಂಫೆಟಮೈನ್ (‘ಶಾಬು’ ಎಂದೂ ಕರೆಯಲ್ಪಡುವ ಅಪಾಯಕಾರಿ ಡ್ರಗ್ಸ್) ಅಡಗಿಸಿಟ್ಟಿರುವುದು ಪತ್ತೆಯಾಯಿತು.
ತನಗೆ ವಾಹನದಲ್ಲಿ ಡ್ರಗ್ಸ್ ಇರುವ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ ಹಾಗೂ ತಾನು ಸಂಪೂರ್ಣ ಮುಗ್ಧ ಎಂದು ಅಬೂಟಿ ವಾದಿಸಿದರೂ ಕಾನೂನು ಸಂಕಷ್ಟದಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಬಂಧನದ ನಂತರ, ತನಿಖಾಧಿಕಾರಿಗಳು ಅಬೂಟಿಯನ್ನು ರಿಯಾದ್ ವಿಮಾನ ನಿಲ್ದಾಣಕ್ಕೆ ಕರೆದೊಯ್ದು ಕುಟುಂಬಕ್ಕೆ ವಾಟ್ಸಾಪ್ ಸಂದೇಶ ಕಳುಹಿಸಲು ಅವಕಾಶ ನೀಡಿದ್ದರು. ಇದು ವಿಚಾರಣೆ ನಡೆಯುವಾಗ ಅವರು ಎಲ್ಲಿದ್ದಾರೆಂಬುದನ್ನು ಮರೆಮಾಚುವ ತಂತ್ರವಾಗಿತ್ತು.
ಅಲ್-ಅಹ್ಸಾ ವಿಚಾರಣಾ ನ್ಯಾಯಾಲಯವು ಆರಂಭದಲ್ಲಿ ಅಬೂಟಿಗೆ 25 ವರ್ಷಗಳ ಜೈಲು ಶಿಕ್ಷೆ ಮತ್ತು 10 ಲಕ್ಷ ಸೌದಿ ರಿಯಾಲ್ (ಸುಮಾರು 2.2 ಕೋಟಿ ರೂ.) ದಂಡ ವಿಧಿಸಿತ್ತು. ಆದರೆ, ಪಬ್ಲಿಕ್ ಪ್ರಾಸಿಕ್ಯೂಷನ್ ಈ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಿ ಕಠಿಣ ಶಿಕ್ಷೆಗೆ ಆಗ್ರಹಿಸಿತು. ತದನಂತರ ಮೇಲ್ಮನವಿ ನ್ಯಾಯಾಲಯವು ಅವರಿಗೆ ಮರಣದಂಡನೆ ಶಿಕ್ಷೆ ವಿಧಿಸಿತು. 2012 ರ ನಂತರ ಸೌದಿ ಅರೇಬಿಯಾದಲ್ಲಿ ಮಾದಕವಸ್ತು ಪ್ರಕರಣಕ್ಕಾಗಿ ಮಲಯಾಳಿಯೊಬ್ಬರಿಗೆ ಮರಣದಂಡನೆಯಾದ ಅಪರೂಪದ ಘಟನೆ ಇದಾಗಿದೆ.
ವಿದೇಶದಲ್ಲಿ ಉದ್ಯೋಗದಲ್ಲಿರುವ ಭಾರತೀಯರಿಗೆ ಎಚ್ಚರಿಕೆ
ಅಪರಿಚಿತರು ನೀಡುವ ಬ್ಯಾಗ್, ಪಾರ್ಸೆಲ್ ಅಥವಾ ಯಾವುದೇ ವಸ್ತುಗಳನ್ನು ಪರಿಶೀಲಿಸದೆ ಸ್ವೀಕರಿಸಬೇಡಿ.
ವಿದೇಶದಲ್ಲಿ ಉದ್ಯೋಗ ಮಾಡುತ್ತಿರುವ ಭಾರತೀಯರಿಗೆ ಈ ಘಟನೆ ಎಚ್ಚರಿಕೆಯ ಸಂದೇಶವಾಗಿದೆ. ಮತ್ತೊಬ್ಬರು ಮಾಡಿದ ತಪ್ಪಿಗೆ ಒಬ್ಬ ಯುವಕ ತನ್ನ ಜೀವನವನ್ನೇ ಕಳೆದುಕೊಳ್ಳುವಂತಹ ಪರಿಸ್ಥಿತಿ ಎದುರಾಗಿದೆ.
ಅಪರಿಚಿತ ವ್ಯಕ್ತಿಗಳು ತಮ್ಮ ಕೈಗೆ ನೀಡುವ ಬ್ಯಾಗ್, ಪಾರ್ಸೆಲ್ ಅಥವಾ ಇತರೆ ಯಾವುದೇ ವಸ್ತುಗಳನ್ನು ಯಾವುದೇ ಕಾರಣಕ್ಕೂ ಪರಿಶೀಲಿಸದೆ ಸ್ವೀಕರಿಸಬಾರದು. ವಿಶೇಷವಾಗಿ, ಮತ್ತೊಬ್ಬರ ಪರವಾಗಿ ಯಾವುದೇ ವಸ್ತುವನ್ನು ಕೊಂಡೊಯ್ಯುವ ಮುನ್ನ ಅದರೊಳಗೆ ಏನಿದೆ ಎಂಬುದನ್ನು ಖಚಿತಪಡಿಸಿಕೊಳ್ಳುವುದು ಅತ್ಯಂತ ಮುಖ್ಯ.
ಯಾಕೆಂದರೆ, ತಮಗೆ ತಿಳಿಯದೆ ಆ ವಸ್ತುವಿನೊಳಗೆ ಕಾನೂನುಬಾಹಿರ ಅಥವಾ ನಿಷೇಧಿತ ವಸ್ತುಗಳು ಇದ್ದರೆ, ಅದರ ಹೊಣೆಗಾರಿಕೆಗೆ ತಾವೇ ಸಿಲುಕುವ ಸಾಧ್ಯತೆ ಇದೆ. ವಿದೇಶಗಳಲ್ಲಿ ಕಾನೂನು ಉಲ್ಲಂಘನೆಗೆ ಕಠಿಣ ಶಿಕ್ಷೆಗಳಿರುವುದರಿಂದ, ನಿರ್ಲಕ್ಷ್ಯದಿಂದ ತೆಗೆದುಕೊಳ್ಳುವ ಒಂದು ನಿರ್ಧಾರವೇ ಜೀವನಪೂರ್ತಿ ಸಂಕಷ್ಟಕ್ಕೆ ಕಾರಣವಾಗಬಹುದು.
ಹೀಗಾಗಿ, ಅಪರಿಚಿತ ವ್ಯಕ್ತಿಗಳು ನೀಡುವ ಯಾವುದೇ ವಸ್ತುವನ್ನು ಸ್ವೀಕರಿಸುವ ಮೊದಲು ಎಚ್ಚರಿಕೆ ವಹಿಸಿ. ಅನುಮಾನಾಸ್ಪದ ವಸ್ತುಗಳನ್ನು ತಕ್ಷಣವೇ ತಿರಸ್ಕರಿಸಿ.
ನಿಮ್ಮ ಸುರಕ್ಷತೆ ಮತ್ತು ಭವಿಷ್ಯ ನಿಮ್ಮ ಕೈಯಲ್ಲಿದೆ.















