ಬಾಗಲಕೋಟೆ: ಜಿಲ್ಲೆಯ ಕಂದಗಲ್ ಗ್ರಾಮದಲ್ಲಿ ಎರಡು ಎಕರೆ ಜಮೀನಿನ ವಿವಾದಕ್ಕೆ ಸಂಬಂಧಿಸಿದಂತೆ ಅತ್ಯಂತ ಕರಾಳ ಹಾಗೂ ಭೀಕರ ಘಟನೆಯೊಂದು ನಡೆದಿದೆ. ಜಮೀನು ವಿಚಾರವಾಗಿ ನಡೆದ ಜಗಳದ ಹಿನ್ನೆಲೆಯಲ್ಲಿ ಮೈದುನನೇ ತನ್ನ ಅತ್ತಿಗೆಯ ಮೇಲೆ ಬೊಲೆರೋ ವಾಹನ ಹಾಯಿಸಿ ಕೊಲೆ ಮಾಡಲು ಯತ್ನಿಸಿರುವ ದಾರುಣ ಘಟನೆ ವರದಿಯಾಗಿದೆ.
ಈ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿರುವ ಮಂಗಳಾದೇವಿ ಅವರು ಸದ್ಯ ಬಾಗಲಕೋಟೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಸಂಪೂರ್ಣ ಕೃತ್ಯದ ದೃಶ್ಯಗಳು ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಮಂಗಳಾದೇವಿ ಹಾಗೂ ಚನ್ನಪ್ಪಗೌಡ ನಾಡಗೌಡರ್ ನಡುವೆ ಒಟ್ಟು ಆರು ಎಕರೆ ಜಮೀನಿನ ವಿಚಾರವಾಗಿ ಹಲವು ವರ್ಷಗಳಿಂದಲೂ ಕಾನೂನು ಹಾಗೂ ಆಸ್ತಿ ವಿವಾದ ನಡೆಯುತ್ತಿತ್ತು. ಮಂಗಳಾದೇವಿಗೆ ಸೇರಬೇಕಾದ ಎರಡು ಎಕರೆ ಜಮೀನನ್ನು ಚನ್ನಪ್ಪಗೌಡ ಅತಿಕ್ರಮಿಸಿಕೊಂಡಿದ್ದಾರೆ ಎಂದು ಗಂಭೀರ ಆರೋಪವಿತ್ತು.
ಈ ಹಿನ್ನೆಲೆಯಲ್ಲಿ ಮಂಗಳಾದೇವಿ ಅವರು ಅಧಿಕೃತ ಸರ್ವೇಯರ್ ಮೂಲಕ ಜಮೀನನ್ನು ಅಳತೆ ಮಾಡಿಸಿದ್ದು, ಆ ಸಂದರ್ಭದಲ್ಲಿ ಜಮೀನು ಅತಿಕ್ರಮಣವಾಗಿರುವುದು ಸ್ಪಷ್ಟವಾಗಿ ತಿಳಿದುಬಂದಿತ್ತು. ತದನಂತರ ಅವರು ತಮ್ಮ ಜಮೀನಿಗೆ ಬೇಲಿ ಹಾಕಿ ಬಿತ್ತನೆ ಕಾರ್ಯವನ್ನೂ ಮಾಡಿದ್ದರು. ಇದರಿಂದ ಆಕ್ರೋಶಗೊಂಡಿದ್ದ ಚನ್ನಪ್ಪಗೌಡ, ಈ ಹಿಂದೆ ಬಿತ್ತನೆ ಮಾಡಿದ್ದ ಹೊಲವನ್ನೇ ಟ್ರ್ಯಾಕ್ಟರ್ ಮೂಲಕ ಹರಗಿಸಿ ಧ್ವಂಸಗೊಳಿಸಿದ್ದನು ಎಂದು ಆರೋಪಿಸಲಾಗಿದೆ
ಅತಿಕ್ರಮಣ ಮಾಡಿಕೊಂಡಿರುವ ಜಮೀನನ್ನು ಬಿಟ್ಟುಕೊಡುವಂತೆ ಮಂಗಳಾದೇವಿ ಅವರು ಚನ್ನಪ್ಪಗೌಡನನ್ನು ಕೇಳಲು ಹೋದಾಗ ವಿವಾದ ಮತ್ತಷ್ಟು ಸ್ಫೋಟಗೊಂಡಿದೆ. ಮಂಗಳಾದೇವಿ ಅವರು ಮತ್ತೊಂದು ಹೊಲದಲ್ಲಿ ಇದ್ದ ವೇಳೆ ಅಲ್ಲಿಗೆ ಏಕಾಏಕಿ ಬಂದ ಚನ್ನಪ್ಪಗೌಡ, ತನ್ನ ಬೊಲೆರೋ ವಾಹನವನ್ನು ಅವರ ಮೇಲೆಯೇ ನೇರವಾಗಿ ಹಾಯಿಸಿದ್ದಾನೆ.
ಈ ಭೀಕರ ಅಪಘಾತದಲ್ಲಿ ಮಂಗಳಾದೇವಿಯ ಕಾಲಿಗೆ ತೀವ್ರ ಪೆಟ್ಟಾಗಿದ್ದು, ದೇಹದ ಒಳಭಾಗದಲ್ಲೂ ಗಂಭೀರ ಗಾಯಗಳಾಗಿವೆ. ಸದ್ಯ ಈ ಘಟನೆಗೆ ಸಂಬಂಧಿಸಿದಂತೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಲಾಗಿದೆ.















