ಛತ್ತೀಸ್‌ಗಢದ ರಾಜನಂದಗಾಂವ್ ಜಿಲ್ಲೆಯಲ್ಲಿ ವಿಜಯದಶಮಿ ಅಂಗವಾಗಿ ನಡೆದ ಸಾಂಪ್ರದಾಯಿಕ ಶಸ್ತ್ರಾಸ್ತ್ರ ಪೂಜೆಯ ಸಂದರ್ಭದಲ್ಲಿ ಮಹಿಳಾ ಪೊಲೀಸ್ ವರಿಷ್ಠಾಧಿಕಾರಿಯೊಬ್ಬರು AK-47 ರೈಫಲ್‌ನಿಂದ ಗಾಳಿಯಲ್ಲಿ ಗುಂಡು ಹಾರಿಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ರಾಜನಂದಗಾಂವ್ ನಗರದ ಪೊಲೀಸ್ ಲೈನ್‌ನಲ್ಲಿ ವಿಜಯದಶಮಿ ಪ್ರಯುಕ್ತ ‘ಶಾಸ್ತ್ರ ಪೂಜೆ’ ಆಯೋಜಿಸಲಾಗಿತ್ತು. ಈ ವೇಳೆ ಪೊಲೀಸ್ ವರಿಷ್ಠಾಧಿಕಾರಿ ಅಂಕಿತಾ ಶರ್ಮಾ ಅವರ ಸಮ್ಮುಖದಲ್ಲಿ ಶಸ್ತ್ರಾಗಾರದಲ್ಲಿರುವ ಶಸ್ತ್ರಾಸ್ತ್ರಗಳು ಮತ್ತು ಪೊಲೀಸ್ ಇಲಾಖೆಯ ವಾಹನಗಳಿಗೆ ಪೂಜೆ ಸಲ್ಲಿಸಲಾಯಿತು.
ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧದ ಚರ್ಚೆ
ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ವಿಡಿಯೋದಲ್ಲಿ ಸೀರೆ ಧರಿಸಿರುವ ಅಂಕಿತಾ ಶರ್ಮಾ ಅವರು AK-47 ರೈಫಲ್‌ನಿಂದ ಗಾಳಿಯಲ್ಲಿ ಹಲವು ಬಾರಿ ಗುಂಡು ಹಾರಿಸುತ್ತಿರುವುದು ಕಂಡುಬಂದಿದೆ. ಮತ್ತೊಂದು ವಿಡಿಯೋದಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕೀರ್ತನ್ ರಾಥೋಡ್ ಕೂಡ ಅವರ ಬಳಿಕ ರೈಫಲ್‌ನಿಂದ ಗುಂಡು ಹಾರಿಸುತ್ತಿರುವ ದೃಶ್ಯವಿದೆ.
ಈ ವಿಡಿಯೋಗೆ ಸಾಮಾಜಿಕ ಜಾಲತಾಣಗಳಲ್ಲಿ ವಿಭಿನ್ನ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಕೆಲವರು ಇದನ್ನು ಸಾಂಪ್ರದಾಯಿಕ ಶಸ್ತ್ರಾಸ್ತ್ರ ಪೂಜೆಯ ಭಾಗವೆಂದು ಪರಿಗಣಿಸಿ ಅಧಿಕಾರಿಯನ್ನು ಸಮರ್ಥಿಸಿಕೊಂಡಿದ್ದಾರೆ. ಇನ್ನು ಕೆಲವರು ಶಸ್ತ್ರಾಸ್ತ್ರಗಳ ಸುರಕ್ಷಿತ ಬಳಕೆ ಮತ್ತು ನಿರ್ವಹಣೆಯ ಕುರಿತು ಪ್ರಶ್ನೆಗಳನ್ನು ಎತ್ತಿದ್ದಾರೆ.
ಇತರ ಜಿಲ್ಲೆಗಳಲ್ಲೂ ಗುಂಡು ಹಾರಿಸಿದ ದೃಶ್ಯಗಳು
ಛತ್ತೀಸ್‌ಗಢದ ರಾಯಪುರ, ಬಿಲಾಸ್‌ಪುರ, ರಾಯ್‌ಗಢ, ದುರ್ಗ್, ಕಬೀರ್‌ಧಾಮ್ ಮತ್ತು ಬಸ್ತಾರ್ ಸೇರಿದಂತೆ ಹಲವು ಜಿಲ್ಲೆಗಳಿಂದಲೂ ಶಸ್ತ್ರಾಸ್ತ್ರ ಪೂಜೆಯ ಬಳಿಕ ಪೊಲೀಸ್ ಅಧಿಕಾರಿಗಳು ಗುಂಡು ಹಾರಿಸುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿಕೊಂಡಿವೆ.
ಈ ವಿಚಾರದ ಬಗ್ಗೆ ಪ್ರತಿಕ್ರಿಯಿಸಿರುವ ಛತ್ತೀಸ್‌ಗಢದ ಉಪಮುಖ್ಯಮಂತ್ರಿ ಅರುಣ್ ಸಾಹ್, ಇಲಾಖೆಯು ಈ ವಿಷಯವನ್ನು ಗಮನಕ್ಕೆ ತೆಗೆದುಕೊಳ್ಳಲಿದೆ ಎಂದು ವರದಿಗಾರರಿಗೆ ತಿಳಿಸಿದ್ದಾರೆ.















