ಬೆಂಗಳೂರು: ಶಾಲಾ ಮಕ್ಕಳ ಸುರಕ್ಷತೆಗೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ಅತ್ಯಂತ ಮಹತ್ವದ ತೀರ್ಪೊಂದನ್ನು ನೀಡಿದೆ. ಶಾಲಾ ಬಸ್ ಕೇವಲ ಶಾಲಾ ಆವರಣದಲ್ಲಿದ್ದಾಗ ಮಾತ್ರವಲ್ಲ, ಮಗು ಬಸ್ ಹತ್ತಿದಾಗಿನಿಂದ ಹಿಡಿದು ಸಂಜೆ ಸುರಕ್ಷಿತವಾಗಿ ಪೋಷಕರ ಕೈ ಸೇರುವವರೆಗೂ ಮಗುವಿನ ಸಂಪೂರ್ಣ ರಕ್ಷಣೆಯ ಜವಾಬ್ದಾರಿ ಶಾಲಾ ಆಡಳಿತ ಮಂಡಳಿಯದ್ದೇ ಆಗಿರುತ್ತದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ಶಾಲಾ ಬಸ್ನಲ್ಲಿ ನಡೆದ ಅಪಘಾತವೊಂದರಲ್ಲಿ ನಾಲ್ಕನೇ ತರಗತಿಯ ವಿದ್ಯಾರ್ಥಿ ಕಣ್ಣು ಕಳೆದುಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ, ಖಾಸಗಿ ಶಾಲೆಯೊಂದರ ಆಡಳಿತ ಮಂಡಳಿ ತನ್ನ ವಿರುದ್ಧದ ಕ್ರಿಮಿನಲ್ ಮೊಕದ್ದಮೆಯನ್ನು ರದ್ದುಗೊಳಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.
ಮಂಡ್ಯ ಜಿಲ್ಲೆಯ ಮದ್ದೂರಿನ ‘ದಿವ್ಯಜ್ಯೋತಿ ಶಾಲಾ ಆಡಳಿತ ಮಂಡಳಿ’ ತಮಗೆ ದಾಖಲಾಗಿದ್ದ ಎಫ್ಐಆರ್ (FIR) ರದ್ದು ಕೋರಿ ಹೈಕೋರ್ಟ್ ಮೆಟ್ಟಿಲೇರಿತ್ತು. ಈ ಕ್ರಿಮಿನಲ್ ಅರ್ಜಿಯ ಸುದೀರ್ಘ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠವು ಶಾಲೆಯ ಮನವಿಯನ್ನು ಪುರಸ್ಕರಿಸಲು ನಿರಾಕರಿಸಿತು. ಬೆಳೆಯುವ ವಯಸ್ಸಿನ ಪುಟ್ಟ ಮಗುವೊಂದು ತನ್ನ ಇಡೀ ಜೀವನವನ್ನು ದೃಷ್ಟಿಹೀನತೆಯ ಶಾಪದೊಂದಿಗೆ ಕಳೆಯುವಂತಾಗಿರುವ ಈ ಗಂಭೀರ ಪರಿಸ್ಥಿತಿಯಲ್ಲಿ, ತನಿಖೆಯ ಆರಂಭಿಕ ಹಂತದಲ್ಲೇ ಪ್ರಕರಣವನ್ನು ರದ್ದುಗೊಳಿಸಲು ಸಾಧ್ಯವಿಲ್ಲ ಎಂದು ನ್ಯಾಯಪೀಠವು ಆದೇಶಿಸಿದೆ
ವಿಚಾರಣೆ ವೇಳೆ ಕಠಿಣ ನಿಲುವು ತಳೆದ ನ್ಯಾಯಾಧೀಶರು, “ಶಾಲಾ ಬಸ್ಗಳಲ್ಲಿ ಮಕ್ಕಳ ಸುರಕ್ಷತೆ ಎನ್ನುವುದು ಕೇವಲ ದಾಕ್ಷಿಣ್ಯ ಅಥವಾ ಅನುಕೂಲದ ವಿಷಯವಲ್ಲ. ಇದು ‘ಕರ್ನಾಟಕ ಶಿಕ್ಷಣ ಸಂಸ್ಥೆಗಳ ನಿಯಮಾವಳಿಗಳು 2018’ ರ ಅಡಿ ಪ್ರತಿಯೊಂದು ಶಾಲೆಯೂ ಕಡ್ಡಾಯವಾಗಿ ಪಾಲಿಸಲೇಬೇಕಾದ ಶಾಸನಬದ್ಧ ಜವಾಬ್ದಾರಿಯಾಗಿದೆ,” ಎಂದು ನೆನಪಿಸಿದರು. ಮಗು ಬಸ್ ಹತ್ತಿದ ಮೇಲೆ ಕೊನೆಯ ಸ್ಟಾಪ್ ಬರುವವರೆಗೂ ಶಾಲಾ ಮಂಡಳಿ ತನಗೂ ಇದಕ್ಕೂ ಸಂಬಂಧವಿಲ್ಲ ಎಂದು ಹೇಳಿ ತನ್ನ ಹೊಣೆಗಾರಿಕೆಯಿಂದ ನುಣುಚಿಕೊಳ್ಳಲು ಸಾಧ್ಯವೇ ಇಲ್ಲ ಎಂದು ನ್ಯಾಯಾಲಯ ತರಾಟೆಗೆ ತೆಗೆದುಕೊಂಡಿತು.
