ಬಂಟ್ವಾಳ : ಪಾಣೆಮಂಗಳೂರು ನೆಹರುನಗರದ ಅಂಡರ್ ಪಾಸ್ ಬಳಿ ಮಾದಕ ವಸ್ತು ಸೇವಿಸಿ ಸಾರ್ವಜನಿಕರಿಗೆ ತೊಂದರೆ ಉಂಟುಮಾಡುತ್ತಿದ್ದ ಆರೋಪದ ಮೇರೆಗೆ ಉಳ್ಳಾಲ ತಾಲೂಕಿನ ಬೋಳಿಯಾರ್ ನಿವಾಸಿ ಮಹಮ್ಮದ್ ನಾಸೀರ್ (29) ಎಂಬಾತನನ್ನು ಬಂಟ್ವಾಳ ನಗರ ಪೊಲೀಸರು ಬಂಧಿಸಿ ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.
ಅ.30 ರಂದು ರಾತ್ರಿ 9.15ರ ಸುಮಾರಿಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯ ಉಪನಿರೀಕ್ಷಕ ಸಂದೀಪ್ ಕುಮಾರ್ ಶೆಟ್ಟಿ ಅವರು ಸಿಬ್ಬಂದಿಗಳೊಂದಿಗೆ ಗಸ್ತಿನಲ್ಲಿದ್ದಾಗ ನೆಹರುನಗರ ಅಂಡರ್‌ಪಾಸ್ ಬಳಿ ಇಬ್ಬರು ವ್ಯಕ್ತಿಗಳು ಮಾದಕ ವಸ್ತು ಸೇವಿಸಿ ಅಸಭ್ಯವಾಗಿ ವರ್ತಿಸುತ್ತಿರುವ ಬಗ್ಗೆ ಮಾಹಿತಿ ಲಭಿಸಿತ್ತು. ಪೊಲೀಸರು ಸ್ಥಳಕ್ಕೆ ತೆರಳಿದಾಗ ಓರ್ವ ಪರಾರಿಯಾಗಿದ್ದು, ಇನ್ನೋರ್ವನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ವಶಕ್ಕೆ ಪಡೆದ ಮಹಮ್ಮದ್ ನಾಸೀರ್ ಮಾದಕ ವಸ್ತು ಸೇವಿಸಿರುವುದಾಗಿ ಒಪ್ಪಿಕೊಂಡಿದ್ದು, ಆತನ ಬಳಿಯಿದ್ದ ಮೊಬೈಲ್ ಹಾಗೂ ಮಾದಕ ವಸ್ತು ಸೇವನೆಗೆ ಬಳಸುವ ಕನ್ನಡಿ ಗಾಜಿನ ಕೊಳವೆಯನ್ನು ಪೊಲೀಸರು ಸ್ವಾಧೀನಪಡಿಸಿಕೊಂಡಿದ್ದಾರೆ. ಪರಾರಿಯಾದ ವ್ಯಕ್ತಿಯನ್ನು ನೆಹರುನಗರದ ಸಿದ್ದೀಕ್ ಎಂದು ಗುರುತಿಸಲಾಗಿದೆ.
ನಾಸೀರ್‌ನನ್ನು ಬಂಟ್ವಾಳ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ, ಅ.31ರಂದು ಬಂದ ಮೂತ್ರ ಪರೀಕ್ಷಾ ವರದಿಯಲ್ಲಿ ಆಂಫೆಟಮೈನ್ (AMPHETAMINE) ಸೇವನೆ ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಆತನ ವಿರುದ್ಧ ಎನ್‌ಡಿಪಿಎಸ್ ಕಾಯ್ದೆ 1985ರ ಕಲಂ 27(ಎ)ರಡಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ














