ಬೆಂಗಳೂರು: ಆಂಧ್ರಪ್ರದೇಶದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಬೆನ್ನಲ್ಲೇ ಇದೀಗ ರಾಜ್ಯದಲ್ಲೂ ಈಗಾಗಲೇ 32ಕ್ಕೂ ಹೆಚ್ಚು ಜನರಿಗೆ ಕೊರೋನಾ ಪಾಸಿಟಿವ್ ಬಂದಿರುವುದು ಆತಂಕ ಮೂಡಿಸಿದೆ.
ರಾಜ್ಯದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ನಿಧಾನವಾಗಿ ಏರಿಕೆಯಾಗುತ್ತಿರುವುದು ವರದಿಯಾಗಿದ್ದು, ಜೂನ್ ತಿಂಗಳ ಅವಧಿಯಲ್ಲಿ ಕೇವಲ 14 ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದವು. ಆದರೆ ಜುಲೈ ತಿಂಗಳ ಕಳೆದ ಕೇವಲ ಹತ್ತು ದಿನಗಳಲ್ಲೇ ಈ ಸಂಖ್ಯೆ 32ಕ್ಕೆ ತಲುಪಿದೆ. ಒಟ್ಟು 193 ಶಂಕಿತರನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಿದಾಗ ಈ 32 ಜನರಲ್ಲಿ ಸೋಂಕು ಇರುವುದು ದೃಢಪಟ್ಟಿದೆ.
ಈ ಕುರಿತು ಮಾಹಿತಿ ನೀಡಿರುವ ಆರೋಗ್ಯ ಇಲಾಖೆಯ ಆಯುಕ್ತರಾದ ಗುರುದತ್ ಹೆಗಡೆ ಅವರು, ಆಂಧ್ರಪ್ರದೇಶದ ಕಡಪಾದಲ್ಲಿ ಸಂಭವಿಸಿರುವ ಸಾವುಗಳು ಸದ್ಯಕ್ಕೆ ಶಂಕಿತ ಪ್ರಕರಣಗಳಾಗಿದ್ದು, ಈ ಬಗ್ಗೆ ಅಲ್ಲಿನ ಸರ್ಕಾರದೊಂದಿಗೆ ಮಾಹಿತಿ ವಿನಿಮಯ ಮಾಡಿಕೊಳ್ಳಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಕರ್ನಾಟಕದಲ್ಲಿ ಪತ್ತೆಯಾಗಿರುವ ಪ್ರಕರಣಗಳು ಅಷ್ಟೊಂದು ಗಂಭೀರ ಸ್ವರೂಪದ್ದಲ್ಲ. ಶಸ್ತ್ರಚಿಕಿತ್ಸೆಗೆ ಮುನ್ನ ನಡೆಸಲಾಗುವ ಕಡ್ಡಾಯ ತಪಾಸಣೆಯ ಸಂದರ್ಭದಲ್ಲಿ ಯಾವುದೇ ರೋಗಲಕ್ಷಣಗಳಿಲ್ಲದ ಈ ಸೋಂಕು ಪತ್ತೆಯಾಗುತ್ತಿದೆ. ಆರೋಗ್ಯ ಇಲಾಖೆಯು ಪ್ರತಿದಿನದ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಸಾರ್ವಜನಿಕರು ಯಾರೂ ಅನಗತ್ಯವಾಗಿ ಆತಂಕ ಪಡುವ ಅಗತ್ಯವಿಲ್ಲ ಎಂದು ಭರವಸೆ ನೀಡಿರುವುದಾಗಿ ತಿಳಿದುಬಂದಿದೆ.
