ಬರೇಲಿ: ಉತ್ತರ ಪ್ರದೇಶದ ಬರೇಲಿ ಜಿಲ್ಲೆಯಲ್ಲಿ ಬೀಸಿದ ಭೀಕರ ಚಂಡಮಾರುತಕ್ಕೆ ವ್ಯಕ್ತಿಯೊಬ್ಬ ತಗಡಿನ ಛಾವಣಿಯೊಂದಿಗೆ ಸುಮಾರು 50 ಅಡಿ ಎತ್ತರಕ್ಕೆ ಗಾಳಿಯಲ್ಲಿ ಹಾರಿದ ಆಘಾತಕಾರಿ ಘಟನೆ ನಡೆದಿದೆ. ಬಾಮಿಯಾನಾ ಗ್ರಾಮದ ಇ-ರಿಕ್ಷಾ ಚಾಲಕ ನಾನ್ಹೆ ಮಿಯಾನ್ (50) ಈ ಘಟನೆಯಲ್ಲಿ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದು, ತೀವ್ರವಾಗಿ ಗಾಯಗೊಂಡಿದ್ದಾರೆ.
ಬುಧವಾರ ಸಂಜೆ ಬಿರುಗಾಳಿ ತೀವ್ರಗೊಂಡಾಗ ಮದುವೆ ಮಂಟಪದ ಶೆಡ್ ಹಾರಿಹೋಗದಂತೆ ಹಗ್ಗ ಹಿಡಿದಿದ್ದ ನಾನ್ಹೆ, ಗಾಳಿಯ ಅಬ್ಬರಕ್ಕೆ ತಗಡಿನ ಸಮೇತ ಆಕಾಶಕ್ಕೆ ಹಾರಿಸಲ್ಪಟ್ಟಿದ್ದರು. ಸುಮಾರು 50 ಅಡಿ ಎತ್ತರಕ್ಕೆ ಹೋದ ಬಳಿಕ ಪಕ್ಕದ ಹೊಲಕ್ಕೆ ಬಿದ್ದಿದ್ದಾರೆ. ಈ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅನೇಕರು ಇದನ್ನು ಎಐ (AI) ಸೃಷ್ಟಿತ ವಿಡಿಯೋ ಎಂದು ಶಂಕಿಸಿದ್ದರು. ಆದರೆ ಸ್ವತಃ ನಾನ್ಹೆ ಮಿಯಾನ್ ತಮ್ಮ ಭೀಕರ ಅನುಭವವನ್ನು ಹಂಚಿಕೊಂಡಿದ್ದಾರೆ. ಉತ್ತರಪ್ರದೇಶದಲ್ಲಿ ಸಂಭವಿಸಿದ ಈ ಹವಾಮಾನ ವೈಪರೀತ್ಯಕ್ಕೆ ಸುಮಾರು 100ಕ್ಕೂ ಅಧಿಕ ಮಂದಿ ಬಲಿಯಾಗಿದ್ದಾರೆ ಎಂದು ವರದಿಯಾಗಿದೆ.
