ಮೊಬೈಲ್ ಕ್ಯಾಂಟೀನ್ಗೆ ಸಂಬಂಧಿಸಿದ ಸರ್ಕಾರಿ ಪ್ರೋತ್ಸಾಹ ಧನ ಮಂಜೂರು ಮಾಡಲು 20 ಸಾವಿರ ರೂಪಾಯಿ ಲಂಚ ಸ್ವೀಕರಿಸುತ್ತಿದ್ದ ಪ್ರವಾಸೋದ್ಯಮ ಇಲಾಖೆಯ ಜಿಲ್ಲಾ ಸಮಾಲೋಚಕನನ್ನು ಲೋಕಾಯುಕ್ತ ಪೊಲೀಸರು ರೆಡ್ಹ್ಯಾಂಡ್ ಆಗಿ ಬಂಧಿಸಿದ್ದಾರೆ.
ಪ್ರವಾಸೋದ್ಯಮ ಇಲಾಖೆಯಲ್ಲಿ ಜಿಲ್ಲಾ ಸಮಾಲೋಚಕರಾಗಿ ಕಾರ್ಯನಿರ್ವಹಿಸುತ್ತಿದ್ದ ಮಲಕಸಾಬ್ ನದಾಫ್ ಲೋಕಾಯುಕ್ತ ಬಲೆಗೆ ಬಿದ್ದ ಆರೋಪಿ ಅಧಿಕಾರಿಯಾಗಿದ್ದಾನೆ.
ಪ್ರಕರಣದ ಹಿನ್ನೆಲೆ
ಮೊಬೈಲ್ ಕ್ಯಾಂಟೀನ್ ಪ್ರೋತ್ಸಾಹ ಧನಕ್ಕಾಗಿ ರವಿಚಂದ್ರ ಮೈದೂರು ಎಂಬುವವರು ಅರ್ಜಿ ಸಲ್ಲಿಸಿದ್ದರು. ಈ ಸಹಾಯಧನ ಬಿಡುಗಡೆ ಮಾಡಲು ಅಧಿಕಾರಿ ಮಲಕಸಾಬ್ 20 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದನು. ಲಂಚ ನೀಡಲು ಇಷ್ಟವಿಲ್ಲದ ರವಿಚಂದ್ರ ಅವರು ಹಾವೇರಿ ಲೋಕಾಯುಕ್ತ ಕಚೇರಿಗೆ ತೆರಳಿ ದೂರು ದಾಖಲಿಸಿದ್ದರು.
ಕಡಿಮೆ ಬಂಡವಾಳದಲ್ಲಿ ಕೈತುಂಬಾ ಆದಾಯ; ಮನೆಯಿಂದಲೇ ಆರಂಭಿಸಬಹುದಾದ 4 ಫುಡ್ ಬಿಸಿನೆಸ್ ಐಡಿಯಾಗಳು!
ಕ್ರೀಡಾಂಗಣದ ಬಳಿ ನಡೆದ ಟ್ರ್ಯಾಪ್ ಕಾರ್ಯಾಚರಣೆ
ದೂರಿನ ಮೇರೆಗೆ ಕಾರ್ಯಪ್ರವೃತ್ತರಾದ ಲೋಕಾಯುಕ್ತ ಪೊಲೀಸರು ವ್ಯವಸ್ಥಿತ ಬಲೆ ಹೆಣೆದಿದ್ದರು. ಹಾವೇರಿ ನಗರದ ಜಿಲ್ಲಾ ಕ್ರೀಡಾಂಗಣದ ಸಮೀಪದ ರಸ್ತೆಯಲ್ಲಿ ಅರ್ಜಿದಾರರಿಂದ ಲಂಚದ ಹಣ ಪಡೆಯುತ್ತಿದ್ದ ಸಂದರ್ಭದಲ್ಲೇ ದಾಳಿ ನಡೆಸಿ, ಮಲಕಸಾಬ್ನನ್ನು ಹಣ ಸಮೇತ ವಶಕ್ಕೆ ಪಡೆದಿದ್ದಾರೆ.
ಹಾವೇರಿ ಲೋಕಾಯುಕ್ತ ಡಿವೈಎಸ್ಪಿ ಮಧುಸೂದನ್ ಅವರ ನೇತೃತ್ವದ ಪೊಲೀಸ್ ತಂಡ ಈ ಕಾರ್ಯಾಚರಣೆ ನಡೆಸಿದೆ. ಬಂಧಿತ ಅಧಿಕಾರಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.















