ಬೆಂಗಳೂರು ದಕ್ಷಿಣ ತಾಲೂಕಿನ ಸಿ.ಕೆ.ತಾಂಡ್ಯ ಸಮೀಪದ ಫಾರ್ಮ್ಹೌಸ್ನಲ್ಲಿ ಯಾವುದೇ ಪರವಾನಗಿ ಇಲ್ಲದೆ ಅಕ್ರಮವಾಗಿ ನಡೆಯುತ್ತಿದ್ದ ಭಾರೀ ನಕಲಿ ಔಷಧಿ ಮರುಪ್ಯಾಕಿಂಗ್ ಜಾಲವನ್ನು ಅಧಿಕಾರಿಗಳು ಭೇದಿಸಿದ್ದಾರೆ.
ಆಹಾರ ಸುರಕ್ಷತೆ ಮತ್ತು ಔಷಧಿ ಆಡಳಿತ ಇಲಾಖೆ ಹಾಗೂ ಪೊಲೀಸರ ಜಂಟಿ ತಂಡ ನಡೆಸಿದ ಈ ಮೆಗಾ ಕಾರ್ಯಾಚರಣೆಯಲ್ಲಿ ಬರೋಬ್ಬರಿ ₹5 ಕೋಟಿ ಮೌಲ್ಯದ ಔಷಧಿಗಳು ಹಾಗೂ ಸಲಕರಣೆಗಳನ್ನು ವಶಪಡಿಸಿಕೊಳ್ಳಲಾಗಿದೆ.
ಪ್ರಶಾಂತ್ ಎಂಬಾತ ಸ್ಥಳೀಯರಿಂದ ಫಾರ್ಮ್ಹೌಸ್ ಅನ್ನು ಗುತ್ತಿಗೆಗೆ (ಲೀಸ್) ಪಡೆದು, ಕಳೆದೊಂದು ವರ್ಷದಿಂದ ಈ ಕೃತ್ಯ ನಡೆಸುತ್ತಿದ್ದನು. ತೆಲಂಗಾಣ ಹಾಗೂ ಹಿಮಾಚಲ ಪ್ರದೇಶದಿಂದ ಅತ್ಯಂತ ಕಡಿಮೆ ಬೆಲೆಯ ಔಷಧಿಗಳನ್ನು ತರಿಸಿಕೊಳ್ಳುತ್ತಿದ್ದ ಈತ, ಪ್ರಸಿದ್ಧ ಬಹುರಾಷ್ಟ್ರೀಯ ಕಂಪನಿಗಳ (MNC) ನಕಲಿ ಲೇಬಲ್ಗಳನ್ನು ಅಂಟಿಸಿ ಮರುಪ್ಯಾಕಿಂಗ್ ಮಾಡುತ್ತಿದ್ದ. ಕೇವಲ ₹600 ಮೌಲ್ಯದ ಸಾಮಾನ್ಯ ಔಷಧಿಗೆ ಬರೋಬ್ಬರಿ ₹6,000 ಬೆಲೆಯ ಕಂಪನಿ ಲೇಬಲ್ ಹಾಕಿ ಮಾರುಕಟ್ಟೆಗೆ ಬಿಟ್ಟು ದುಪ್ಪಟ್ಟು ಲಾಭ ಗಳಿಸುತ್ತಿದ್ದ ಎಂಬುದು ತನಿಖೆಯಿಂದ ಬೆಳಕಿಗೆ ಬಂದಿದೆ.
ಸ್ಥಳೀಯ ಬೀಟ್ ಪೊಲೀಸರಿಗೆ ಸಿಕ್ಕ ಖಚಿತ ಸುಳಿವಿನ ಆಧಾರದ ಮೇಲೆ, ಆರೋಗ್ಯ ಇಲಾಖೆ ಆಯುಕ್ತ ಶ್ರೀನಿವಾಸ್ ಮತ್ತು ರಾಮನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಶ್ರೀನಿವಾಸ್ ಗೌಡ ಅವರ ನೇತೃತ್ವದಲ್ಲಿ 30ಕ್ಕೂ ಹೆಚ್ಚು ಅಧಿಕಾರಿಗಳ ತಂಡ ಏಕಕಾಲದಲ್ಲಿ ದಾಳಿ ಸಂಘಟಿಸಿತು.
ದಾಳಿಯ ಸಂದರ್ಭದಲ್ಲಿ ಸುಮಾರು ₹5 ಕೋಟಿ ಮೌಲ್ಯದ ನಕಲಿ ಮಾತ್ರೆಗಳು-ಸಿರಪ್ಗಳು, ನಕಲಿ ಬ್ರ್ಯಾಂಡ್ ಲೇಬಲ್ಗಳು, ಅವಧಿ ಮೀರಿದ (Expired) ಔಷಧಿಗಳು ಹಾಗೂ ಖಾಲಿ ಬಾಟಲಿಗಳನ್ನು ಜಪ್ತಿ ಮಾಡಲಾಗಿದೆ. ಈ ಜಾಲದ ಹಿಂದಿರುವ ಇತರ ವ್ಯಕ್ತಿಗಳು ಮತ್ತು ಜಾಲದ ವ್ಯಾಪ್ತಿಯ ಕುರಿತು ಆಹಾರ ಸುರಕ್ಷತಾ ಅಧಿಕಾರಿಗಳು ಹಾಗೂ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ ಎಂದು ಎಸ್ಪಿ ಶ್ರೀನಿವಾಸ್ ಗೌಡ ತಿಳಿಸಿದ್ದಾರೆ.















