ದುಬೈನಿಂದ ಟೆಲ್ ಅವಿವ್ಗೆ ತೆರಳುತ್ತಿದ್ದ ಫ್ಲೈದುಬೈ ವಿಮಾನದಲ್ಲಿ ಭಾರತೀಯ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಅವರ ಮೇಲೆ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿರುವ ಸಹ ಪೈಲಟ್ ಹಮಾಮ್ ಅಲ್ಹಮಾಮಿ (Hamam Alhamami) ಅವರಿಗೆ ಉಗ್ರಗಾಮಿ ವಿಚಾರಗಳ ಕುರಿತ ಆತಂಕದ ಹಿನ್ನೆಲೆಯಲ್ಲಿ ಒಮಾನ್ನಲ್ಲಿ ಹಾರಾಟ ನಿಷೇಧಿಸಲಾಗಿತ್ತು ಎಂದು ವರದಿಯಾಗಿದೆ.
ವರದಿಗಳ ಪ್ರಕಾರ, ಅಲ್ಹಮಾಮಿ ಹೆಚ್ಚಿನ ಸಮಯವನ್ನು ಒಮಾನ್ನ ಹೊರಗೆ, ವಿಶೇಷವಾಗಿ ಸಿರಿಯಾದಲ್ಲಿ ಕಳೆದಿದ್ದರು. ಅಲ್ಲಿ ಅವರು ಉಗ್ರಗಾಮಿ ವಿಚಾರಗಳಿಂದ ಪ್ರಭಾವಿತರಾಗಿದ್ದರು ಎಂಬ ಆರೋಪವಿದೆ. ಬಳಿಕ ಅವರು ಯುನೈಟೆಡ್ ಅರಬ್ ಎಮಿರೇಟ್ಸ್ಗೆ ತೆರಳಿದ್ದರು ಎನ್ನಲಾಗಿದೆ. ಈ ಹಿಂದೆ ಹಾರಾಟಕ್ಕೆ ನಿರ್ಬಂಧವಿದ್ದರೂ ಫ್ಲೈದುಬೈ ಅವರನ್ನು ನೇಮಕ ಮಾಡಿಕೊಂಡಿತ್ತು ಎಂದು ವರದಿಗಳು ತಿಳಿಸಿವೆ.
ವಿಮಾನದಲ್ಲಿ ನಡೆದಿದ್ದೇನು?
ದುಬೈನಿಂದ ಟೆಲ್ ಅವಿವ್ಗೆ ತೆರಳುತ್ತಿದ್ದ ಫ್ಲೈದುಬೈ ವಿಮಾನದಲ್ಲಿ ಸಹ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಅವರ ಮೇಲೆ ಕೊಡಲಿಯಂತಹ ಉಪಕರಣ ಬಳಸಿ ಹಲ್ಲೆ ನಡೆಸಿದ್ದಾನೆ ಎಂದು ವರದಿಯಾಗಿದೆ. ಗಾಯಗೊಂಡಿದ್ದರೂ ಮಚ್ಚಾರ್ ಕಾಕ್ಪಿಟ್ ಬಾಗಿಲು ತೆರೆದು ಸಹಾಯಕ್ಕಾಗಿ ಕೂಗಿದ್ದರು ಎನ್ನಲಾಗಿದೆ.
ಇದರಿಂದ ಎಚ್ಚೆತ್ತ ಪ್ರಯಾಣಿಕರು ಕಾಕ್ಪಿಟ್ಗೆ ಧಾವಿಸಿ ದಾಳಿ ನಡೆಸಿದ ಸಹ ಪೈಲಟ್ನನ್ನು ಹಿಡಿದು ನಿಯಂತ್ರಣಕ್ಕೆ ತಂದರು. ವಿಮಾನದಲ್ಲಿದ್ದ ಇತರ ಪೈಲಟ್ಗಳು ನಿಯಂತ್ರಣದ ಜವಾಬ್ದಾರಿ ವಹಿಸಿಕೊಂಡು, ಸೌದಿ ಅರೇಬಿಯಾದ ತಬೂಕ್ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದರು.
ಘಟನೆಯ ಹಿಂದೆ ಉಗ್ರಗಾಮಿ ಉದ್ದೇಶವಿತ್ತೇ ಎಂಬುದೂ ಸೇರಿದಂತೆ ಹಲವು ಆಯಾಮಗಳಲ್ಲಿ ತನಿಖೆ ನಡೆಯುತ್ತಿದೆ. ಸಹ ಪೈಲಟ್ನ ಹಿನ್ನೆಲೆ ಮತ್ತು ವಿಮಾನಯಾನ ಸಂಸ್ಥೆಯ ನೇಮಕಾತಿ ಪ್ರಕ್ರಿಯೆಯ ಬಗ್ಗೆಯೂ ಪರಿಶೀಲನೆ ನಡೆಯುತ್ತಿದೆ.















