ದುಬೈನಿಂದ ಇಸ್ರೇಲ್ನ ಟೆಲ್ ಅವೀವ್ಗೆ ತೆರಳುತ್ತಿದ್ದ ಫ್ಲೈದುಬೈ ವಿಮಾನ FZ1073 ರ ಕಾಕ್ಪಿಟ್ನಲ್ಲಿ ಸಹ-ಪೈಲಟ್ನಿಂದ ನಡೆದ ಮಾರಣಾಂತಿಕ ದಾಳಿಯನ್ನು ವಿಫಲಗೊಳಿಸಿ, ನೂರಾರು ಜೀವಗಳನ್ನು ಉಳಿಸಿದ ಭಾರತೀಯ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಅವರ ಸಾಹಸಕ್ಕೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹಾಗೂ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ವಿಶ್ವದ ನಾಯಕರಿಂದ ಭಾರೀ ಪ್ರಶಂಸೆ ವ್ಯಕ್ತವಾಗಿದೆ.
ಸಹ-ಪೈಲಟ್ನ ದಾಳಿಯಿಂದ ತೀವ್ರವಾಗಿ ಗಾಯಗೊಂಡು ರಕ್ತದ ಮಡಲಲ್ಲಿ ಬಿದ್ದಿದ್ದರೂ, ಕ್ಯಾಪ್ಟನ್ ಮಚ್ಚರ್ ತಮ್ಮ ಕೊನೆಯ ಹಂತದ ಶಕ್ತಿಯನ್ನು ಬಳಸಿ ಕಾಕ್ಪಿಟ್ ಬಾಗಿಲನ್ನು ತೆರೆದರು. ಇದರಿಂದಾಗಿ ಪ್ರಯಾಣಿಕರು ಮತ್ತು ಸಿಬ್ಬಂದಿ ಒಳಗೆ ನುಗ್ಗಿ ದಾಳಿಕೋರನನ್ನು ಹದ್ದುಬಸ್ತಿನಲ್ಲಿಡಲು ಸಾಧ್ಯವಾಯಿತು ಎಂದು ಇಸ್ರೇಲ್ ಪ್ರಧಾನಿ ನೆತನ್ಯಾಹು ತಿಳಿಸಿದ್ದಾರೆ. ವಿಮಾನದಲ್ಲಿದ್ದ ಇಸ್ರೇಲಿ ಪ್ರಯಾಣಿಕ ಯಾನಿವ್ ಹಯುನ್ ಕೂಡ ದಾಳಿಕೋರನನ್ನು ಕುತ್ತಿಗೆಯಿಕ್ಕಿ (chokehold) ನಿಯಂತ್ರಿಸಲು ಸಹಾಯ ಮಾಡಿದರು. ಈ ಘಟನೆಯು ಮತ್ತೊಂದು 9/11 ಮಾದರಿಯ ವಿನಾಶಕಾರಿ ದುರಂತವನ್ನು ತಪ್ಪಿಸಿದೆ ಎಂದು ಬಣ್ಣಿಸಿರುವ ನೆತನ್ಯಾಹು, ಇಸ್ರೇಲಿ ನಾಗರಿಕರು ಸೇರಿದಂತೆ 174 ಜನರ ಪ್ರಾಣ ಉಳಿಸಿದ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಮತ್ತು ಪ್ರಯಾಣಿಕರ ಸಾಹಸವನ್ನು ಕೊಂಡಾಡಿದ್ದಾರೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೂಡ ಈ ಸಾಹಸವನ್ನು ಶ್ಲಾಘಿಸಿದ್ದು, ದಾಳಿಕೋರನ ಹಿನ್ನೆಲೆ ಹಾಗೂ ಉದ್ದೇಶದ ಬಗ್ಗೆ ಸೌದಿ ಅರೇಬಿಯಾ ಮತ್ತು ಇತರೆ ದೇಶಗಳು ತನಿಖೆ ಮುಂದುವರಿಸಿವೆ.
ಪ್ರಧಾನಿ ನರೇಂದ್ರ ಮೋದಿ ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ, ತೀವ್ರ ಅಪಾಯದ ನಡುವೆಯೂ ಕ್ಯಾಪ್ಟನ್ ಸ್ಮಿತ್ ಮಚ್ಚರ್ ತೋರಿದ ಅಸಾಧಾರಣ ಧೈರ್ಯ ಮತ್ತು ದೃಢಸಂಕಲ್ಪವು ನೂರಾರು ಜನರ ಜೀವ ಉಳಿಸಿದೆ ಎಂದು ಪ್ರಶಂಸಿಸಿದ್ದಾರೆ. ಭಾರತಕ್ಕೆ ಹೆಮ್ಮೆಯಾಗಿರುವ ಕ್ಯಾಪ್ಟನ್ ಮಚ್ಚರ್ ಅವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸಿದ್ದಾರೆ. ಸೌದಿ ಅರೇಬಿಯಾದ ತಬುಕ್ನಲ್ಲಿರುವ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕ್ಯಾಪ್ಟನ್ ಮಚ್ಚರ್ ಅವರ ಆರೋಗ್ಯ ಸ್ಥಿರವಾಗಿದ್ದು, ಸೌದಿ ಅಧಿಕಾರಿಗಳು ಹಾಗೂ ಭಾರತೀಯ ದೂತವಾಸದ ಅಧಿಕಾರಿಗಳು ನಿರಂತರ ಸಂಪರ್ಕದಲ್ಲಿದ್ದಾರೆ. 13 ವರ್ಷಗಳಿಗೂ ಅಧಿಕ ವಾಣಿಜ್ಯ ವಿಮಾನಯಾನ ಅನುಭವ ಹೊಂದಿರುವ ಮಚ್ಚರ್, ಈ ಹಿಂದೆ ಭಾರತದ ಸ್ಪೈಸ್ಜೆಟ್ ಸಂಸ್ಥೆಯಲ್ಲಿ 11 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ಈ ಗಂಭೀರ ಭದ್ರತಾ ವೈಫಲ್ಯದ ಹಿನ್ನೆಲೆಯಲ್ಲಿ ಫ್ಲೈದುಬೈ ಸಂಸ್ಥೆಯು ಇಸ್ರೇಲ್ಗೆ ತೆರಳುವ ಹಾಗೂ ಬರುವ ವಿಮಾನಗಳ ಹಾರಾಟವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ.















