ಸರ್ಕಾರಿ ಬಿಲ್ಗಳ ವಿಲೇವಾರಿಯಲ್ಲಿ ಅನಗತ್ಯ ವಿಳಂಬ ಮತ್ತು ಮಂಜೂರಾತಿಗಾಗಿ ಕಮಿಷನ್ ಪಡೆಯಲಾಗುತ್ತಿದೆ ಎಂಬ ಸಾರ್ವಜನಿಕರ ದೂರುಗಳ ಬೆನ್ನಲ್ಲೇ, ರಾಜಧಾನಿಯ ವಿವಿಧ ಖಜಾನೆ (ಟ್ರೆಜರಿ) ಕಚೇರಿಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳ ತಂಡ ಭಾರಿ ಪ್ರಮಾಣದ ದಿಢೀರ್ ದಾಳಿ ನಡೆಸಿ ಪರಿಶೀಲನೆ ನಡೆಸಿದೆ.
ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್. ಪಾಟೀಲ್, ಉಪಲೋಕಾಯುಕ್ತರಾದ ಕೆ.ಎನ್. ಫಣೀಂದ್ರ ಮತ್ತು ಬಿ. ವೀರಪ್ಪ ಹಾಗೂ ಎಡಿಜಿಪಿ ಮನೀಶ್ ಖರ್ಭೀಕರ್ ಅವರ ನೇತೃತ್ವದಲ್ಲಿ ಈ ಮೆಗಾ ಕಾರ್ಯಾಚರಣೆ ನಡೆದಿದೆ. ಒಟ್ಟು 11 ನ್ಯಾಯಾಂಗ ಅಧಿಕಾರಿಗಳು ಮತ್ತು 39 ಪೊಲೀಸ್ ಸಿಬ್ಬಂದಿಯನ್ನು ಒಳಗೊಂಡ 13 ಪ್ರತ್ಯೇಕ ತಂಡಗಳು ಬೆಂಗಳೂರು ನಗರದ 7, ಗ್ರಾಮಾಂತರದ 5 ಖಜಾನೆಗಳು ಹಾಗೂ ಕೆಜಿಐಡಿ ಖಜಾನೆ ಕಚೇರಿಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿದವು.
‘ರೌಂಡ್ ರಾಬಿನ್’ ನಿಯಮ ಗಾಳಿಗೆ; ಪರಿಶೀಲನೆ ವೇಳೆ ಸಿಕ್ಕಿಬಿದ್ದ ಲೋಪಗಳು
ನಿಯಮಾವಳಿಗಳ ಪ್ರಕಾರ ಖಜಾನೆಗೆ ಬರುವ ಬಿಲ್ಗಳನ್ನು ಸಿಬ್ಬಂದಿಗೆ ಸಮಾನವಾಗಿ ವಿಂಗಡಿಸುವ ‘ರೌಂಡ್ ರಾಬಿನ್’ ಪದ್ಧತಿ ಜಾರಿಯಲ್ಲಿದ್ದರೂ, ಅದನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿತ್ತು. ಕಮಿಷನ್ ಪಡೆಯುವ ದುರುದ್ದೇಶದಿಂದ ಬಿಲ್ಗಳನ್ನು ಆಯ್ದ ಸಿಬ್ಬಂದಿಗೆ ವಹಿಸಿ, ಪರಿಶೀಲನೆಯ ನೆಪದಲ್ಲಿ ವಾರಗಟ್ಟಲೆ ಬಾಕಿ ಇರಿಸಿಕೊಳ್ಳಲಾಗುತ್ತಿತ್ತು ಎಂಬುದು ಪರಿಶೀಲನೆ ವೇಳೆ ಬೆಳಕಿಗೆ ಬಂದಿದೆ.
ದಾಳಿಯ ಸಮಯದಲ್ಲಿ ಕಚೇರಿಯ ಸಿಬ್ಬಂದಿ ಅಧಿಕೃತ ಗುರುತಿನ ಚೀಟಿ ಹಾಗೂ ನಿಯಮಿತ ಸಮವಸ್ತ್ರ ಧರಿಸದೇ ಇರುವುದು ಕಂಡುಬಂದಿದೆ. ಇದರ ಜೊತೆಗೆ, ಹಣಕಾಸಿನ ವಹಿವಾಟಿಗೆ ಸಂಬಂಧಿಸಿದ ಪ್ರಮುಖ ಲೆಕ್ಕಪತ್ರ ಹಾಗೂ ನಮೂದು ಪುಸ್ತಕಗಳನ್ನು ಸರಿಯಾಗಿ ನಿರ್ವಹಿಸದಿರುವುದು ಸೇರಿದಂತೆ ಸಾಲು ಸಾಲು ಲೋಪದೋಷಗಳು ಕಂಡುಬಂದಿವೆ.
ಮಾಸಿಕ 70 ಸಾವಿರ ವೇತನ ಪಡೆಯುವ ಅಧಿಕಾರಿಗೆ ತಿಂಗಳಿಗೆ 6 ಲಕ್ಷ ರೂ. ಜಮೆ!
ಮಲ್ಲೇಶ್ವರದಲ್ಲಿರುವ ಉತ್ತರ ವಿಭಾಗದ ಖಜಾನೆ ಕಚೇರಿಗೆ ಭೇಟಿ ನೀಡಿದ್ದ ಉಪಲೋಕಾಯುಕ್ತ ನ್ಯಾಯಮೂರ್ತಿ ಬಿ. ವೀರಪ್ಪ ಅವರು, ಅಧಿಕಾರಿಗಳ ಬ್ಯಾಂಕ್ ಖಾತೆಗಳನ್ನು ತನಿಖೆಗೊಳಪಡಿಸಿದಾಗ ಸ್ಫೋಟಕ ಮಾಹಿತಿ ಹೊರಬಿದ್ದಿದೆ. ಕೇವಲ ₹70,000 ಮಾಸಿಕ ವೇತನ ಪಡೆಯುವ ಅಧಿಕಾರಿಯೊಬ್ಬರ ಖಾತೆಗೆ ಕಳೆದ 8 ತಿಂಗಳಿನಿಂದ ಸುಮಾರು ₹23 ಲಕ್ಷ ಜಮೆಯಾಗಿರುವುದು ಪತ್ತೆಯಾಗಿದೆ. ಅಂದರೆ, ಪ್ರತಿ ತಿಂಗಳು ಸರಾಸರಿ ₹5 ರಿಂದ ₹6 ಲಕ್ಷದಷ್ಟು ಅನುಮಾನಾಸ್ಪದ ಹಣ ಅವರ ಖಾತೆಗೆ ವರ್ಗಾವಣೆಯಾಗಿದೆ.
ಈ ಭಾರಿ ಮೊತ್ತದ ಹಣದ ಮೂಲದ ಕುರಿತು ಸಂಬಂಧಪಟ್ಟ ಅಧಿಕಾರಿಯು ಯಾವುದೇ ಸೂಕ್ತ ವಿವರಣೆ ನೀಡಲು ವಿಫಲರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಸದರಿ ಅಧಿಕಾರಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಸಮಗ್ರ ತನಿಖೆ ನಡೆಸುವಂತೆ ಅಧಿಕಾರಿಗಳಿಗೆ ಬಿ. ವೀರಪ್ಪ ಅವರು ಸೂಚಿಸಿದ್ದಾರೆ. ಕಮಿಷನ್ ದಂಧೆಗೆ ಕಡಿವಾಣ ಹಾಕಲು ಇಂತಹ ಪರಿಶೀಲನೆಗಳು ಮುಂದುವರಿಯಲಿವೆ ಎಂದು ಲೋಕಾಯುಕ್ತ ತಿಳಿಸಿದೆ















