ಲೋಕಾಯುಕ್ತ ಅಧಿಕಾರಿಗಳ ಹೆಸರಿನಲ್ಲಿ ಸರಕಾರಿ ಅಧಿಕಾರಿಗಳಿಗೆ ಬೆದರಿಕೆಯೊಡ್ಡಿ ಹಣ ವಸೂಲಿ ಮಾಡುತ್ತಿದ್ದ ಆರ್ಟಿಐ (RTI) ಕಾರ್ಯಕರ್ತನನ್ನು ವಿಧಾನಸೌಧ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಮುರಳಿ ಎಂದು ಗುರುತಿಸಲಾಗಿದ್ದು, ಈತ ಲೋಕಾಯುಕ್ತ ಕಚೇರಿಯ ನಕಲಿ ಲೆಟರ್ ಹೆಡ್ ಬಳಸಿಕೊಂಡು ಅಧಿಕಾರಿಗಳಿಂದ ಅಕ್ರಮವಾಗಿ ಹಣ ಪೀಕುತ್ತಿದ್ದ ಆರೋಪ ಎದುರಿಸುತ್ತಿದ್ದಾನೆ.
ತನಿಖೆಯ ವೇಳೆ ಆರೋಪಿ ಮುರಳಿ ತಾನು ಅರಣ್ಯಾಧಿಕಾರಿ ಎಂದು ಹೇಳಿಕೊಳ್ಳಲು ನಕಲಿ ಗುರುತಿನ ಚೀಟಿ (ID Card) ಹೊಂದಿದ್ದು ಕಂಡುಬಂದಿದೆ. ನಕಲಿ ದಾಖಲೆಗಳನ್ನು ಸೃಷ್ಟಿಸಿ ಸರಕಾರಿ ನೌಕರರನ್ನು ಭಯಬೀಳಿಸಿ ವಸೂಲಿ ದಂಧೆ ನಡೆಸುತ್ತಿದ್ದ ಈತನನ್ನು ವಶಕ್ಕೆ ಪಡೆದಿರುವ ವಿಧಾನಸೌಧ ಪೊಲೀಸರು, ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಜೈಲಿಗಟ್ಟಿದ್ದಾರೆ.















